ಅತೀ ಹೆಚ್ಚು ಚಿನ್ನ ಉತ್ಪಾದಿಸುವ ”ಹಟ್ಟಿ” ಚಿನ್ನದ ಗಣಿಯನ್ನು ಹೊಂದಿರುವ ಲಿಂಗಸುಗೂರು ವಿಧಾನಸಭಾ ಕ್ಷೇತ್ರವು ಚಾರಿತ್ರಿಕವಾಗಿ ಹಲವಾರು ಸಂಗತಿಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ವಿಶೇಷ ಕ್ಷೇತ್ರವಾಗಿದೆ. ಯಾವುದೇ ಪಕ್ಷದ ಭದ್ರಕೋಟೆಯಾಗಿ ಈವರೆಗೂ ಗುರುತಿಸಿಕೊಂಡಿಲ್ಲದ ಈ ಕ್ಷೇತ್ರವು ರಾಜಕೀಯವಾಗಿ ಹಲವು ಕುತೂಹಲಗಳಿಗೆ ಸಾಕ್ಷಿಯಾಗಿದೆ.
ರಾಯಚೂರು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಲಿಂಗಸುಗೂರು ಪ್ರಮುಖವಾಗಿದ್ದು, ಕೃಷ್ಣಾ ನದಿಯ ತಟದಲ್ಲಿದೆ. ಇಲ್ಲಿನ ಜನರ ನೀರಾವರಿ ಚಟುವಟಿಕೆಗಳಿಗೆ ಕೃಷ್ಣೆಯೇ ಆಶ್ರಯವಾಗಿದೆ. ಚಾರಿತ್ರಿಕ ಇತಿಹಾಸವನ್ನು ಒಳಗೊಂಡ ಈ ಕ್ಷೇತ್ರವು ಸಿಂಧೂ ನಾಗರಿಕತೆಯಿಂದ ಹಿಡಿದು ಸ್ವಾತಂತ್ಯ್ರ ಪೂರ್ವದವರೆಗೂ ತನ್ನದೇ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿದೆ. ಅಶೋಕನ ಕಾಲಕ್ಕಿಂತಲೂ ಮೊದಲೇ ಇಲ್ಲಿನ ಹಟ್ಟಿ ಚಿನ್ನದ ಗಣಿಯಲ್ಲಿ ಗಣಿಗಾರಿಕೆ ನಡೆದಿರುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಲಿಂಗಸುಗೂರು ಬ್ರಿಟ್ರಿಷರ ಜಿಲ್ಲಾ ಕೇಂದ್ರವಾಗಿದ್ದು, ಸೈನಿಕರ ನೆಲೆಯಾಗಿತ್ತು, ಈ ಕಾರಣಕ್ಕಾಗಿ ಈ ಕ್ಷೇತ್ರಕ್ಕೆ ಛಾವಣಿ ಎಂಬ ಬಿರುದು ದೊರತಿದೆ.
ಹಲವಾರು ರಾಜ ಮನೆತನಗಳು ಈ ಭಾಗದಲ್ಲಿ ಆಳ್ವಿಕೆ ನಡೆಸಿವೆ. ಅನೇಕ ಕೋಟೆಗಳನ್ನು ಇಲ್ಲಿ ಕಟ್ಟಲಾಗಿದೆ. ಪ್ರಸ್ತುತ ಕ್ಷೇತ್ರದಲ್ಲಿ ಒಟ್ಟು 2,53,335 ಮತದಾರರಿದ್ದು, ಈ ಪೈಕಿ 1,25,885 ಪುರುಷರು, 1,27,441 ಮಹಿಳೆಯ ಮತದಾರರಿದ್ದಾರೆ. 4717 ಜನ 80 ವರ್ಷ ಮೇಲ್ಪಟ್ಟವರಾಗಿದ್ದು, 9 ಮಂದಿ ತೃತೀಯ ಲಿಂಗಿಗಳಿದ್ದಾರೆ.
ಸುಗಮ ಮತದಾನಕ್ಕಾಗಿ 278 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತ್ತು.