ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಲಿಂಗಸಗೂರು: ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ಯುವತಿ ಮನಿಷಾ ವಾಲ್ಮೀಕಿ ಮೇಲೆ ನಡೆದ ಗುಂಪು ಅತ್ಯಾಚಾರವನ್ನು ಪ್ರತಿಭಟಿಸುತ್ತಾ, ಅಲ್ಲಿನ ಕಾನೂನಿನ ವಿಳಂಬ ನೀತಿಯನ್ನು ಖಂಡಿಸುತ್ತಾ, ಉತ್ತರ ಪ್ರದೇಶದ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಷವನ್ನು ಸ್ಥಳಿಯ ಹಲವು ಪ್ರಗತಿಪರ ಸಂಘಟನೆಗಳು ಹಾಗೂ ಒಕ್ಕೂಟವು ಅಕ್ಟೋಬರ್ 02, 03 ರಂದು ಸಹಾಯಕ ಆಯುಕ್ತರ ಮೂಲಕ, ಅತ್ಯಾಚಾರಿಗಳಿಗೆ ಕಠಿಣ ಕ್ರಮವನ್ನು ಜರುಗಿಸಲು ಮಾನ್ಯ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿದವು.

ಯುವತಿ ಮನೀಷಾ ವಾಲ್ಮೀಕಿಯ ಅತ್ಯಾಚಾರವನ್ನೆಸಗಿದ್ದಲ್ಲದೇ ಅಮಾನುಷವಾಗಿ ದೈಹಿಕವಾಗಿ ನರಳಿಸಿ ಸಾವಿಗೆ ಕಾರಣರಾದವರನ್ನುಉತ್ತರಪ್ರದೇಶ ಸರ್ಕಾರ ಶಿಕ್ಷಿಸಲು ವಿಳಂಬ ನೀತಿಯನ್ನು ಅನುಸರಿಸುತ್ತಿದೆ, ಈ ಪ್ರಕರಣವನ್ನುಫಾಸ್ಟ್ ಟ್ರ್ಯಾಕ್ ಕೋರ್ಟಿನಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ನಿರ್ದಯ ಶಿಕ್ಷೆ ವಿಧಿಸಲು ಮನವಿಯನ್ನು ಸಲ್ಲಿಸಿದವು.

ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಅಂಬೇಡ್ಕರ್ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಕರುನಾಡ ಸೇನೆ, ಕರುನಾಡ ವಿಜಯ ಸೇನೆ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಯ ಜಿಲ್ಲಾವಾರು ಹಾಗೂ ತಾಲೂಕಿನ ಪದಾಧಿಕಾರಿಗಳು, ಸಂಚಾಲಕರು, ಕಾರ್ಯದರ್ಶಿಗಳು ಸೇರಿದಂತೆ ನೂರಾರು ಸದಸ್ಯರು ಮತ್ತು ಮುಖಂಡರುಗಳು, ಚಿಂತಕರು ದಲಿತ ಯುವತಿ ಮನೀಷಾ ವಾಲ್ಮೀಕಿ ಸಾವಿನ ನ್ಯಾಯದ ಸಲುವಾಗಿ ಪ್ರತಿಭಟನಾ ಮೇರವಣಿಗೆ ಹಾಗೂ ಮನವಿ ಸಲ್ಲುವಿಕೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.