ನವದೆಹಲಿ: ಕೋವಿಡ್-19 ವಿರುದ್ಧದ ಲಸಿಕೀಕರಣದಲ್ಲಿ 100 ಕೋಟಿ ದಾಟುವ ಮೂಲಕ ದೇಶ ಮಹತ್ವದ ಮೈಲಿಗಲ್ಲು ದಾಟಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಅವರು, ಕೋವಿಡ್ ಲಸಿಕೆ ನೀಡಿಕೆಯಲ್ಲಿ ಭಾರತ 100 ಕೋಟಿ ದಾಟಿರುವುದು ದೇಶದ ಸಫಲತೆಯ ಸಂಕೇತವಾಗಿದೆ. ಅದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು. ಇದು ಟೀಂ ಇಂಡಿಯಾದ ಶಕ್ತಿಯ ಸಂಕೇತವಾಗಿದೆ. ಈ ಸಾಧನೆ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸೇರಿದ್ದು ಎಂದು ಅವರು ಹೇಳಿದರು. ಸಾಂಕ್ರಾಮಿಕ ಇಡೀ ಜಗತ್ತಿಗೆ ವ್ಯಾಪಿಸಿದಾಗ ಎಲ್ಲರೂ ಭಾರತ, ಈ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತದೆ? ಹೇಗೆ ಭಾರತ ಇತರೆ ರಾಷ್ಟ್ರಗಳಿಂದ ಲಸಿಕೆ ಖರೀದಿಸಲು ಹಣ ಹೊಂದಿಸುತ್ತದೆ? ಭಾರತ ಹೇಗೆ ಲಸಿಕೆ ಪಡೆಯುತ್ತದೆ ಎಂದು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಆ ಪ್ರಶ್ನೆಗಳಿಗೆ ಇಂದು ಉತ್ತರ ದೊರೆತಿದೆ ಎಂದು ಪ್ರಧಾನಿ ಹೇಳಿದರು. ಲಸಿಕೆ ನೀಡಿಕೆಯಲ್ಲಿ 100 ಕೋಟಿ ಗುರಿ ಮುಟ್ಟಿದ ಮಾತ್ರಕ್ಕೆ ಹೋರಾಟ ಮುಗಿದಿಲ್ಲ. ಇನ್ನೂ ಈ ಹೋರಾಟವನ್ನು ಮುಂದುವರಿಸಬೇಕಿದೆ. ಅದಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಲಸಿಕಾ ಕಾರ್ಯಕ್ರಮ ವಿಜ್ಞಾನದಿಂದ ಆರಂಭವಾಗಿ ವಿಜ್ಞಾನ ಆಧರಿಸಿ ವೈಜ್ಞಾನಿಕ ತಳಹದಿಯ ಮೇಲೆ ನಡೆದಿದೆ ಎಂದು ತಿಳಿಸಿದರು. ಪ್ರಜಾತಂತ್ರದ ಅರ್ಥವೇ ಎಲ್ಲರೊಂದಿಗೆ ಎಂಬುದಾಗಿದೆ. ರೋಗ, ಬೇಧ-ಭಾವ ಮಾಡುವುದಿಲ್ಲ. ಹಾಗಾಗಿ, ಲಸಿಕೆಯಲ್ಲೂ ಸಮಾನತೆ ತೋರಲಾಗಿದೆ. ಎಲ್ಲಾ ರಾಜ್ಯಗಳಿಗೂ ಲಸಿಕೆಯನ್ನು ಬೇಡಿಕೆಗೆ ತಕ್ಕಂತೆ ಪೂರೈಸಲಾಗಿದೆ. ನಮ್ಮ ದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಾರೆ ಎಂಬ ಅಪವಾದವನ್ನು 100 ಕೋಟಿ ಲಸಿಕೀಕರಣದ ಮೂಲಕ ಅಳಿಸಿ ಹಾಕಲಾಗಿದೆ. ಎಲ್ಲರ ಪ್ರಯತ್ನ ಇದ್ದಾಗ ಪರಿಣಾಮವೂ ಅದ್ಭುತವಾಗಿರುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು. ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಜನರ ಒಗ್ಗಟ್ಟನ್ನು ಬಳಸಿಕೊಳ್ಳಲಾಯಿತು. ವೈಜ್ಞಾನಿಕ ಆವಿಷ್ಕಾರಗಳ ಮೂಲಕ ಲಸಿಕೀಕರಣ ಕೈಗೊಳ್ಳಲಾಯಿತು. ಆವಿಷ್ಕಾರ, ಉತ್ಪಾದನೆ, ವಿತರಣೆಯ ಎಲ್ಲಾ ಸವಾಲುಗಳನ್ನು ವೈಜ್ಞಾನಿಕ ರೀತಿಯಲ್ಲಿ ಎದುರಿಸಲಾಯಿತು ಎಂದರು. ದೇಶದೆಲ್ಲೆಡೆ ವಿಶ್ವಾಸ ಹೆಚ್ಚಿದೆ. ಅರ್ಥವ್ಯವಸ್ಥೆಯೂ ಉತ್ತಮಗೊಳ್ಳುತ್ತಿದೆ. ಸ್ಟಾರ್ಟ್ ಅಪ್ ಗಳಲ್ಲಿ ದಾಖಲೆ ಪ್ರಮಾಣದ ಹೂಡಿಕೆಯಾಗಿದೆ. ಗತಿಶಕ್ತಿಯಿಂದ ಡ್ರೋಣ್ ನಿಯಮದವರೆಗೆ ಹೊಸ ಯೋಜನೆಗಳು ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ರೈತರ ಬದುಕು ಉತ್ತಮಗೊಳ್ಳುತ್ತಿದೆ. ಎಲ್ಲಾ ವಲಯಗಳಲ್ಲೂ ಉತ್ಪಾದಕತೆ ಹೆಚ್ಚುತ್ತಿದೆ. ಮೇಡ್ ಇನ್ ಇಂಡಿಯಾ ಶಕ್ತಿಯ ಬಗ್ಗೆ ಎಲ್ಲರಿಗೂ ಮನದಟ್ಟಾಗಿದ್ದು, ದೇಶದಲ್ಲಿ ಉತ್ಪಾದಿಸಲ್ಪಟ್ಟ ವಸ್ತುಗಳಿಗೆ ಹೆಚ್ಚು ಮನ್ನಣೆ ನೀಡಬೇಕಾಗಿದೆ. ಸ್ಥಳೀಯ ಉತ್ಪನ್ನಗಳಿಗೆ ಧನಿಯಾಗಿ – ವೋಕಲ್ ಫಾರ್ ಲೋಕಲ್ ಮಂತ್ರವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ಕರೆ ನೀಡಿದರು. ಕಳೆದ ದೀಪಾವಳಿ ಸಮಯದಲ್ಲಿದ್ದ ದುಗುಡ ಈಗ 100 ಕೋಟಿ ಲಸಿಕೀಕರಣದಿಂದಾಗಿ ದೂರವಾಗಿದೆ. ದೀಪಾವಳಿಯ ಸಮಯದಲ್ಲಿ ವ್ಯಾಪಾರ ಹೆಚ್ಚುತ್ತದೆ. ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಈ ಹಬ್ಬ ಆಶಾಕಿರಣವಾಗಿದೆ. ನಮ್ಮ ಈ ಸಫಲತೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆದರೂ ಜಾಗರೂಕರಾಗಿರುವುದು ಅತ್ಯವಶ್ಯಕ ಎಂದು ಪ್ರಧಾನಿ ನುಡಿದರು.
