ರಾಜ್ಯದ ಬೆಳಕಿನ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ರಾಯಚೂರು ಸಾಂಸ್ಕೃತಿಕ, ಐತಿಹಾಸಿಕ ಮತ್ತು ಸಾಮಾಜಿಕವಾಗಿ ಹಲವು ಮಹತ್ವದ ಘಟನಾವಳಿಗಳಿಗೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, ರಾಜಕೀಯ ಪ್ರತಿಷ್ಠೆಯ ಕಣವಾಗಿವೆ. ಈ ಕುರಿತು ಒಂದು ವರದಿ.
ಕೃಷ್ಣ ಮತ್ತು ತುಂಗಭದ್ರಾ ನದಿಗಳ ನಡುವಿನ ಎಡದೊರೆ ನಾಡು ಎಂದು ಪ್ರಸಿದ್ಧವಾಗಿರುವ ರಾಯಚೂರು ಜಿಲ್ಲೆ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಅರಸರು, ಬಹುಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶ. ಅಶೋಕನ ಕಾಲದ ಶಾಸನವೊಂದು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ದೊರೆತಿದೆ. ರಾಯ ಎಂದರೆ ರಾಜ ಎಂಬುದು ಜನಜನಿತ ಅರ್ಥ. ರಾಯಚೂರು ರಾಜನ ಊರೆಂದು ಪ್ರಖ್ಯಾತಿ ಪಡೆದಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಒಂದು ಪ್ರಸಿದ್ಧ ಯಾತ್ರಾಸ್ಥಳ. ಇಲ್ಲಿ ಕಲ್ಯಾಣ ಚಾಲುಕ್ಯರ ಹಲವು ಶಾಸನಗಳು ದೊರೆತಿದ್ದು, ಹಲವು ದೇವಾಲಯಗಳಿಂದ ಈ ಸ್ಥಳ ಪ್ರಖ್ಯಾತಿ ಪಡೆದಿದೆ. ವೀರಶೈವ, ಜೈನ ಮತ್ತು ಬೌದ್ಧ ಪರಂಪರೆಯ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿದ್ದ ಈ ಸ್ಥಳದಲ್ಲಿ ದೊರೆತಿರುವ 1148ರ ಕಾಲದ ಶಾಸನವೊಂದರಲ್ಲಿ ಆದ್ಯ ವಚನಕಾರ ಜೇಡರ ದಾಸಿಮಯ್ಯನ ಉಲ್ಲೇಖವನ್ನು ಕಾಣಬಹುದಾಗಿದೆ.
ಸಿಂಧನೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಔರಂಗಜೇಬನ ಕಾಲದ ಮಸೀದಿ ಇದೆ. ದಿದ್ದಿಗಿಯಲ್ಲಿ ರಾಷ್ಟ್ರಕೂಟರ ಶಾಸನವೊಂದು ದೊರೆತಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿಯೂ ಜಿಲ್ಲೆ ತನ್ನದೇ ಆದ ಮಹತ್ವವನ್ನು ಪಡೆದಿದೆ. ಲಿಂಗಸುಗೂರು ಪಟ್ಟಣದಲ್ಲಿ ಬ್ರಿಟಿಷರ ಕಾಲದ ಕಟ್ಟಡಗಳು ಸೇರಿದಂತೆ ಹಲವು ಪ್ರೇಕ್ಷಣಿಯ ಸ್ಥಳಗಳು ಹಾಗೂ ಹಟ್ಟಿ ಚಿನ್ನದ ಗಣಿ, ಮುದಗಲ್ ಕೋಟೆ, ಜಲದುರ್ಗ ಕೋಟೆ ಹಲವಾರು ಸುಕ್ಷೇತ್ರಗಳು ತಾಲೂಕಿಗೆ ಒಳಪಟ್ಟಿದ್ದು, ರಾಯಚೂರು ಜಿಲ್ಲೆಯು ಸಮಕಾಲೀನ ರಾಜಕೀಯ ಕ್ಷೇತ್ರದಲ್ಲಿ ಪ್ರತಿಷ್ಠೆಯ ಕಣವಾಗಿದೆ.
7 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ 4 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವುದು ವಿಶೇಷ. ಒಂದು ಕ್ಷೇತ್ರ ಪರಿಶಿಷ್ಟ ಜಾತಿಗೆ, 2 ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಈ ಪೈಕಿ ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಲಿಂಗಸುಗೂರು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಉಳಿದಂತೆ, ರಾಯಚೂರು ನಗರ ಹಾಗೂ ಸಿಂಧನೂರು ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ. ಜಿಲ್ಲೆಯಲ್ಲಿ ಒಟ್ಟು 1,840 ಮತಗಟ್ಟೆಗಳಿದ್ದು, 16,18,848 ಮತದಾರರಿದ್ದಾರೆ. ಈ ಪೈಕಿ 7,97,553 ಪುರುಷರು, 8,21,035 ಮಹಿಳೆಯರು, 260 ತೃತೀಯ ಲಿಂಗಿ ಮತದಾರರಿದ್ದಾರೆ.
ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ 29,980 ಯುವ ಮತದಾರರಿದ್ದು, ಜಿಲ್ಲೆಯ 7 ಕ್ಷೇತ್ರಗಳಲ್ಲಿ ಒಟ್ಟು 18,071 ದಿವ್ಯಾಂಗ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 24,740 ಹಿರಿಯ ಮತದಾರರಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಮಾದರಿ ನೀತಿಸಂಹಿತೆ ಕಟ್ಟುನಿಟ್ಟಿನ ಜಾರಿಗೆ ಅಧಿಕಾರಿಗಳ ತಂಡ ಸಜ್ಜಾಗಿವೆ.