ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಕ್ತಾಯವಾಗಿದ್ದು, 1945 ನಾಮಪತ್ರಗಳು ತಿರಸ್ಕೃತವಾಗಿವೆ. ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ, ಒಟ್ಟು 4989 ನಾಮಪತ್ರಗಳ ಪೈಕಿ 3044 ನಾಮಪತ್ರಗಳು ಅಂಗೀಕೃತಗೊಂಡಿವೆ.
ಇದೇ 13ರಂದು ಅಧಿಸೂಚನೆ ಪ್ರಕಟವಾದ ಬಳಿಕ, ಆರಂಭವಾಗಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇದೇ 20ರಂದು ಅಂತ್ಯಗೊಂಡಿತ್ತು. ಚುನಾವಣಾ ಆಯೋಗ ಒಟ್ಟು 4989 ನಾಮಪತ್ರಗಳನ್ನು ಸ್ವೀಕರಿಸಿತ್ತು. ಅದರಲ್ಲಿ 4607 ಪುರುಷರು ಹಾಗೂ 381 ಮಹಿಳಾ ಅಭ್ಯರ್ಥಿಗಳು, ಇತರೆ 01.
ಈ ವೇಳೆ ನಿನ್ನೆ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆದಿದ್ದು, 219 ಬಿಜೆಪಿ ಅಭ್ಯರ್ಥಿಗಳು , ಕಾಂಗ್ರೆಸ್ ನ 218, ಜೆಡಿಎಸ್ ನ 207, ಆಮ್ ಆದ್ಮಿ ಪಕ್ಷದ 207 ಹಾಗೂ ಇತರೆ ಪಕ್ಷಗಳಿಂದ ಸಲ್ಲಿಸಲ್ಪಟ್ಟಿದ್ದ 720, ಪಕ್ಷೇತರರ 1334 ನಾಮಪತ್ರಗಳನ್ನು ಅಂಗೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ವಿವಿಧೆಡೆ ಅಭ್ಯರ್ಥಿಗಳ ನಾಮಪತ್ರದಲ್ಲಿನ ಮಾಹಿತಿ ವ್ಯತ್ಯಾಸದ ಹಿನ್ನೆಲೆಯಲ್ಲಿ , ಆಕ್ಷೇಪ ವ್ಯಕ್ತಗೊಂಡ ಕಾರಣ, ಸವದತ್ತಿ , ಔರಾದ್, ಹಾವೇರಿ, ರಾಯಚೂರು ಮತ್ತು ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ನಾಮಪತ್ರ ವಾಪಸ್ ಪಡೆಯಲು 24 ಕೊನೆಯ ದಿನವಾಗಿದೆ. ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.