ಮುಂಗಾರು ಅಧಿವೇಶನ:
ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್ ಧನಕರ್ ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು. ಇತ್ತೀಚೆಗೆ ಅಗಲಿದ ಹಾಲಿ ಸಂಸದ ಹರದ್ವಾರ್ ದುಬೆ ಮತ್ತು ಮೂವರು ಮಾಜಿ ಸದಸ್ಯರ ನಿಧನ ಕುರಿತು ಸದನಕ್ಕೆ ಮಾಹಿತಿ ನೀಡಿ, ಅಗಲಿದ ಗಣ್ಯರಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.
ಬಳಿಕ ವಿರೋಧ ಪಕ್ಷಗಳು ಮಣಿಪುರ ಹಿಂಸಾಚಾರ ಪ್ರಕರಣ ಕುರಿತು ಚರ್ಚೆ ಅವಕಾಶ ನೀಡುವಂತೆ ಒತ್ತಾಯಿಸಿದವು. ಜಗದೀಪ್ ಧನಕರ್ ಅವರು ವಿರೋಧ ಪಕ್ಷಗಳು ಮಣಿಪುರದ ಹಿಂಸಾಚಾರ, ಬಾಲಸೋರ್ ರೈಲ್ವೆ ಅಪಘಾತ, ನಿರುದ್ಯೋಗ ಸೇರಿದಂತೆ ಇತರ ವಿಷಯಗಳ ಕುರಿತು ಅಲ್ಪಾವಧಿ ಚರ್ಚೆಗೆ ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಪಿಯೂಷ್ ಗೋಯಲ್ ಸರ್ಕಾರ ಎಲ್ಲ ವಿಷಯಗಳ ಚರ್ಚೆಗೆ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು. ಸಭಾಪತಿ ಅವರು, ಮಣಿಪುರ ವಿಚಾರ ಕುರಿತು ನೀಡಲಾಗಿರುವ ನೋಟಿಸ್ ಕ್ರಮಬದ್ಧವಾಗಿದ್ದು,ನಿಯಮ 176ರಡಿ ಅಲ್ಪಾವಧಿ ಚರ್ಚೆ ಮಾಡಬಹುದು ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ , ನಿಯಮ 267ರಡಿ ಎಲ್ಲ ಕಲಾಪಗಳನ್ನು ಬದಿಗಿರಿಸಿ ಆದ್ಯತೆ ಮೇರೆಗೆ ಮಣಿಪುರ ವಿಚಾರಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಈ ವಿಚಾರ ಕುರಿತು ಪ್ರಧಾನಿ ನೀಡಿರುವ ಹೇಳಿಕೆ ಬಗ್ಗೆಯೂ ಗಮನ ಸೆಳೆದರು. ಟಿಎಂಸಿಯ ಡೇರಿಕ್ ಓ ಬ್ರಹಾನ್ ಇದಕ್ಕೆ ಧ್ವನಿಗೂಡಿಸಿದರು. ಈ ಹಂತದಲ್ಲಿ ಪರ-ವಿರುದ್ಧ ಘೋಷಣೆಗಳು ಕೇಳಿಬಂದವು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಗದ್ದಲ ನಡೆದು ಕಲಾಪವನ್ನು ಮಧ್ಯಾಹ್ನ2 ಕ್ಕೆ ಮುಂದೂಡಲಾಯಿತು.
ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದುವರೆದಾಗಲೂ ಗದ್ದಲ ಮುಂದುವರೆಯಿತು. ಈ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆ 11 ಗಂಟೆಗೆ ಮುಂದೂಡಲಾಯಿತು. ಇದರ ನಡುವೆ ಸಿನಿಮಾಟೋಗ್ರಫಿ ತಿದ್ದುಪಡಿ ಮಸೂದೆಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮಂಡಿಸಿದರು.
ಬಳಿಕ ಮಸೂದೆಗೆ ಅನುಮೋದನೆ ದೊರೆಯಿತು. ಈ ಕಾಯ್ದೆಯಿಂದ ಚಲನಚಿತ್ರಗಳ ಪೈರಸಿ ಹಾಗೂ ಚಲನಚಿತ್ರಗಳ ತುಣುಕುಗಳನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡುವುದಕ್ಕೆ ಕಡಿವಾಣ ಹಾಕಲು ಅನುಕೂಲವಾಗಲಿದೆ.