ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಏರೋ ಇಂಡಿಯಾ ಪ್ರದರ್ಶನದ ಹಿನ್ನೆಲೆಯಲ್ಲಿ ಯಲಹಂಕದಲ್ಲಿ ಆಯೋಜಿಸಿದ್ದ ಸಾಕ್ಷಿ ಬಂಧನ್ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಬಳಿಕ ಅವರು, ರಕ್ಷಣಾ ಇಲಾಖೆಯಲ್ಲಿ ಆತ್ಮನಿರ್ಭರಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಮುಖ್ಯವಾಗಿ ಯುದ್ಧ ಸಾಮಗ್ರಿಗಳಿಗಾಗಿ ವಿದೇಶಗಳನ್ನು ಅಲವಂಬಿಸದೇ, ದೇಶೀಯವಾಗಿಯೇ ತಯಾರಾಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ ಯೋಜನೆಯನ್ನು ಆರಂಭಿಸಿದ್ದಾರೆ ಎಂದರು. ರಕ್ಷಣಾ ವಲಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ರಕ್ಷಣಾ ವಲಯದತ್ತ ಯುವಜನರ ಒಲವು ಹೆಚ್ಚುತ್ತಿದೆ. ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, 5 ಕೋಟಿ 94 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಭಾಗವಾಗಿ ಆಯೋಜಿಸಿದ್ದ ಮಂಥನ-2023 ಕಾರ್ಯಕ್ರಮವನ್ನು ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು. ಬಳಿಕ ಅವರು, ದೇಶದಲ್ಲಿ ನವೋದ್ಯಮಗಳು ಅತಿ ವೇಗದಲ್ಲಿ ಮುನ್ನಡೆಯುತ್ತಿವೆ, ಕಳೆದ ಏಳೆಂಟು ವರ್ಷಗಳಲ್ಲಿ ಇವುಗಳ ಸಂಖ್ಯೆ ಒಂದು ಲಕ್ಷ ಮೀರಿದೆ. ಮಂಥನ ಕಾರ್ಯಕ್ರಮದ ಮೂಲಕ ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಂಡಿರುವ ಯುವ ಜನತೆಯನ್ನು ಒಂದೆಡೆ ಸೇರಿಸುವ ಧ್ಯೇಯ ಹೊಂದಲಾಗಿದೆ ಎಂದು ಹೇಳಿದರು. ‘ಮಂಥನ್’ ಭಾರತದ ಉದಯೋನ್ಮುಖ ಉದ್ಯಮಿಗಳಿಗೆ ಒಂದು ವಿಶಿಷ್ಟ ವೇದಿಕೆಯಾಗಿದೆ. ಭಾರತದಲ್ಲಿ ನವೋದ್ಯಮಗಳು ಮತ್ತು ಯುನಿಕಾರ್ನ್‌ಗಳ ಸಂಖ್ಯೆಯು ಹೆಚ್ಚುತ್ತಿದ್ದು, ಇವುಗಳಿಗಾಗಿ ಹೆಚ್ಚು ಅನುಕೂಲಕರ ವಾತಾವರಣ ನಿರ್ಮಿಸಲಾಗುತ್ತಿದೆ. ಮಂಥನದ ಮೂಲಕ, ರಕ್ಷಣಾ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಇ-ನಿರ್ವಹಣೆ ಸೇರಿದಂತೆ ಇತರ ಆವಿಷ್ಕಾರಗಳ ಕ್ಷೇತ್ರದಲ್ಲಿ ನಮ್ಮ ಯುವಕರು ಸಾಮರ್ಥ್ಯ ಪ್ರದರ್ಶಿಸಲು ನೆರವು ನೀಡಲಾಗುತ್ತದೆ. ರಕ್ಷಣಾ ವಲಯವನ್ನು ಸಬಲೀಕರಣಗೊಳಿಸಲು ಮಂಥನದಡಿ ಯುವಕರಿಗೆ ಉತ್ತೇಜನ ನೀಡಲಾಗುತ್ತದೆ ಎಂದರು.
_CLICK to Follow-Support us on shareChat