ಎಂ. ಸುಬ್ಬರಾಯರು: (ಮಾಹಿತಿ ಕೃಪೆ: ಕರ್ನಾಟಕ ನಾಟಕ ಅಕಾಡೆಮಿ)
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಸಣ್ಣ ಗ್ರಾಮ ಮೂಕನಹಳ್ಳಿಯಲ್ಲಿ ಸುಬ್ಬರಾಯರ ಜನನವಾಯಿತು. ತಂದೆ ರಾಮಣ್ಣ, ತಾಯಿ ಅಚ್ಚಮ್ಮ. ಹನ್ನೋಂದನೆಯ ತಿಂಗಳಲ್ಲೇ ತಾಯಿ ಗತಿಸಿಹೊದರು. ಗೈರಿ ಬಿದನೂರು ತಾಲ್ಲೂಕು ಹುಣಸೇನಹಳ್ಳಿ ರಾಯರ ಪೂರ್ವ ಸ್ಥಳ. ಬಾಲ್ಯದಿಂದಲೂ ಅವರಿಗೆ ಸಂಗೀತದಲ್ಲಿ ಅಭಿರುಚಿ, ದೇವರ ನಾಮಗಳನ್ನು ಹಾಡುತ್ತಿದ್ದರು.
ಗುಬ್ಬಿಯ ಚಂದಣ್ಣನವರ ಕಂಪನಿ (ಗುಬ್ಬಿ ಕಂಪನಿ)ಯಲ್ಲಿ ಸುಬ್ಬರಾಯರ ಮಾವ ನಟಭಯಂಕರ ಗಂಗಾಧರರಾಯರಿದ್ದರು. ಗುಬ್ಬಿ ಚಂದಣ್ಣನವರ ಡೇರಾದಲ್ಲಿ ಸುಬ್ಬರಾಯರು ತಮ್ಮ ಕೆಲವು ಸ್ನೇಹಿತರೊಂದಿಗೆ ʼಪ್ರಲ್ಹಾದ ಚರಿತ್ರೆʼ ನಾಟಕವಾಡಿದರು. ಆ ನಾಟಕಕ್ಕೆ ನಾಟಕರತ್ನ ಜಿ ಎಚ್ ವೀರಣ್ಣನವರು ಹಾರ್ಮೋನಿಯಂ ನುಡಿಸಿದರು.
1919 ಗುಬ್ಬಿ ಕಂಪನಿ ತುಮಕೂರು ಮೊಕ್ಕಾಂ ಮಾಡಿತು. ಈ ಮೊಕ್ಕಾಂನಲ್ಲಿ ರಾಯರು ಗುಬ್ಬಿ ಕಂಪನಿಗೆ ಪದಾರ್ಪಣೆ ಮಾಡಿದುದು. ʼಸದಾರಮೆʼ ನಾಟಕದಲ್ಲಿ ರಾಜಕುಮಾರನ ಪಾತ್ರ ಲಭ್ಯವಾಯಿತು. ಇದು ವೃತ್ತಿ ಕಂಪನಿಯಲ್ಲಿ ರಾಯರ ಪ್ರಥಮ ಪಾತ್ರ.
ಬೆಳ್ಳಾವೆ ನರಹರಿಶಾಸ್ತ್ರಿಗಳಿಂದ ವಿರಚಿತವಾದ ʼ ಶ್ರೀ ಕೃಷ್ಣಲೀಲಾʼ, ʼಕಂಸವಧಾʼ, ʼಯಮಗರ್ವಭಂಗʼ, ಮತ್ತು ʼರುಕ್ಮಿಣಿ ಸ್ವಯಂವರʼ ಮೊದಲಾದ ನಾಟಕಗಳನ್ನು ಕಂಪನಿ ಪ್ರದರ್ಶಿಸತೊಡಗಿತು. ʼರುಕ್ಮಿಣಿ ಸ್ವಯಂವರʼ ದಲ್ಲಿ ರಾಯರು ನಿರ್ವಹಿಸಿದ ಕೃಷ್ಣನ ಪಾತ್ರ ಕಲಾರಸಿಕರ ಮನವನ್ನು ಸೂರೆಗೊಂಡಿತು.
ಮಾತನಾಡುವ ವೈಖರಿಯನ್ನುಗಂಗಾಧರರಾಯರನ್ನುನೋಡಿಯೂ, ಪ್ರಸಾಧನ ಮತ್ತು ವೇಷಭೂಷಣಗಳನ್ನು ಸಿ ಬಿ ಮಲ್ಲಪ್ಪನವರನ್ನು ನೋಡಿಯೂ, ಹಾಡುತಕ್ಕ ಕ್ರಮವನ್ನು ಜಿ ನಾಗೇಶರಾಯರನ್ನು ನೋಡಿಯೂ ಕಲಿತರು.
ಈ ಮೂವರ ಸಂಪರ್ಕದಿಂದ ಸುಬ್ಬರಾಯರ ಪಾತ್ರಗಳಿಗೆ ಪುಷ್ಠಿ ಬಂದಿತು. ನಂತರ ಗುಬ್ಬಿ ಕಂಪನಿಯಲ್ಲಿ ಆಂಜನೇಯ ಪಾತ್ರ ನಿರ್ವಹಿಸತೊಡಗಿದರು. 1924 ಕ್ಕೆ ಮುಂಚೆ ಗುಬ್ಬಿ ಕಂಪನಿಯಲ್ಲಿದ್ದ ಸುಬ್ಬರಾಯರು ಆನಂತರ ʼಭಾರತ ಜನ ಮನೋಲ್ಲಾಸಿನಿ ನಾಟಕ ಸಭಾʼ ಕ್ಕೆ ಸೇರಿದರು. ಪ್ರಾರಂಭದಲ್ಲಿ ʼವೀರಸಿಂಹ ಚರಿತ್ರೆʼ ಯಲ್ಲಿ ಚಿಕ್ಕರಾಣಿಯ ಪಾತ್ರವನ್ನು ಶ್ರೀ ರಾಚೋಟೆಪ್ಪನವರೇ ಹೇಳಿಕೊಟ್ಟು ಮಾಡಿಸಿದರು. ನಂತರ ದ್ರೌಪದಿ, ಕಯಾದು, ಚಂದ್ರಮತಿ, ಶಾಕುಂತಲಾ, ಚಾರುಮತಿ ಮೊದಲಾದ ಪಾತ್ರಗಳನ್ನು ನಿರ್ವಹಿಸತೊಡಗಿದರು. ಈ ಸ್ತ್ರೀ ಪಾತ್ರಗಳಲ್ಲಿ ʼಕಯಾದುʼ ಪಾತ್ರ ಅವರಿಗೆ ಅಪಾರ ಕೀರ್ತಿ ತಂದಿತು.
1935 ಗುಬ್ಬಿ ಕಂಪನಿ ಅದ್ಧೂರಿಯ ರಂಗಸಜ್ಜಿಕೆ, ಉಡಿಗೆ-ತೊಡಿಗೆಯ ಭವ್ಯ ಪೌರಾಣಿಕ ನಾಟಕ ʼಕುರುಕ್ಷೇತ್ರʼ ವನ್ನು ಪ್ರದರ್ಶಿಸತೊಡಗಿತು. ಪ್ರಯೋಗ, ಅಭಿನಯ, ರಂಗಸಜ್ಜಿಕೆ ಈ ಎಲ್ಲಾ ದೃಷ್ಟಿಯಿಂದಲೂ ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿದ್ದ ಈ ನಾಟಕದಲ್ಲಿ ಅರ್ಜುನನಾಗಿ ಎಂ ಸುಬ್ಬರಾಯರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಈ ಪಾತ್ರದಲ್ಲಿ ಅವರು ತಮ್ಮ ಗಾಯನದಿಂದ ಪ್ರೇಕ್ಷಕರಿಗೆ ಕರ್ಣಾನಂದನವನ್ನುಂಟು ಮಾಡುತ್ತಿದ್ದರು.
ಗುಬ್ಬಿ ಕಂಪನಿ, ಗಂಗಾಧರರಾಯರ ಕಂಪನಿಯ ಮೂಲಕ ರಾಯರು ಐದು ದಶಕಗಳ ಪರ್ಯಂತ ಕನ್ನಡ ರಂಗಭೂಮಿಯ ಸೇವೆಯನ್ನು ಸಲ್ಲಿಸಿದ್ದಾರೆ.
ಈ ಅಭಿನವ ಶಿಖಾಮಣಿ ಕಲಾ ಸೇವೆಯನ್ನು ಮೆಚ್ಚಿ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿ 1965ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಇದನ್ನೂ ಓದಿ:
