ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ, ಯೋಗ ದಸರಾ ಉಪ ಸಮಿತಿ-2022ರ ವತಿಯಿಂದ ಆಯೋಜಿಸಿದ್ದ “ಯೋಗವಾಹಿನಿ” ಕಾರ್ಯಕ್ರಮಕ್ಕೆ ಇಂದು ಶಾಸಕ ಎಲ್.ನಾಗೇಂದ್ರ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಜವರೇಗೌಡ ಪಾರ್ಕ್‌ನಲ್ಲಿ ಯೋಗ ದಸರಾ ಸಮಿತಿಯಿಂದ ಏರ್ಪಡಿಸಿದ್ದ ಯೋಗ ದಸರಾ ಕಾರ್ಯಕ್ರಮದಲ್ಲಿ ಸ್ಥಳೀಯರು, ಯೋಗಪಟುಗಳು ವಿವಿಧ ಆಸನಗಳನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಬಳಿಕ ಶಾಸಕ ನಾಗೇಂದ್ರ, ಪ್ರಧಾನಿ ನರೇಂದ್ರ ಮೋದಿ ಈ ಬಾರಿ ವಿಶ್ವ ಯೋಗ ದಿನಾಚರಣೆಯನ್ನು ಮೈಸೂರಿನಲ್ಲಿ ಆಚರಿಸುವ ಮೂಲಕ ಯೋಗಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ಯೋಗಪಟುಗಳನ್ನು ಒಟ್ಟಾಗಿ ಸೇರಿಸಿ ವಿಶ್ವದಾಖಲೆ ಮಾಡುವ ಮೂಲಕ ಮೈಸೂರಿನ ಕೀರ್ತಿ ಹೆಚ್ಚಿಸುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.
ಯೋಗ ಪಟು ವೀಣಾ ಶ್ರೀಕಾಂತ್, ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೆ ಯೋಗ ರಾಮಬಾಣವಾಗಿದೆ. ಯುವಜನರು ಹೆಚ್ಚು ಯೋಗದತ್ತ ಗಮನಹರಿಸುವ ಮೂಲಕ ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
_ನಮ್ಮನ್ನು ʼಡೇಲಿಹಂಟ್ʼ ನಲ್ಲಿ ಫಾಲೋಮಾಡಲು ಕ್ಲಿಕ್ಕಿಸಿ