ಭಾರತ ರತ್ನ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಸಂಗೀತ ಪಯಣ ಹಲವು ದಶಕಗಳ ಕಾಲದ್ದು, ಅವರ ಬದುಕು ಸಂಗೀತವೇ ಆಗಿತ್ತು. ಅವರ ಸಾಧನೆ ಹಾದಿಯ ಬಗ್ಗೆ ಕಿರು ಮಾಹಿತಿ ಇಲ್ಲಿದೆ. ಭಾರತೀಯ ಸಿನಿಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರದ ಮಹಾನ್ ಸಾಧಕಿ ಲತಾ ಮಂಗೇಶ್ಕರ್ ಗಾನ ಕೋಗಿಲೆ ಎಂದೇ ಹೆಸರಾಗಿದ್ದರು. ಮಧುರ ಗಾಯನಕ್ಕೆ ಮತ್ತೊಂದು ಹೆಸರಾಗಿದ್ದ ಅವರನ್ನು ದೇಶ ಅತ್ಯಂತ ಪ್ರೀತಿಯಿಂದ ಲತಾ ದೀದಿ ಎಂದೇ ಕರೆಯುತ್ತಿತ್ತು. ವಿಶಿಷ್ಟ ಮತ್ತು ಗೌರವಪೂರ್ಣ ವ್ಯಕ್ತಿತ್ವದ ಲತಾ ಮಂಗೇಶ್ಕರ್ ತಮ್ಮ ಜೀವಿತ ಕಾಲದಲ್ಲಿಯೇ ದಂತ ಕಥೆಯಾಗಿದ್ದರು. ಲತಾ ಮಂಗೇಶ್ಕರ್ 1929ರ ಸೆಪ್ಟೆಂಬರ್ 28ರಂದು ಮಧ್ಯಪ್ರದೇಶದ ಇಂಧೂರ್ ನಲ್ಲಿ ಜನಿಸಿದ್ದರು. ಹೇಮಾ ಎಂಬುದು ಅವರ ಮೂಲ ಹೆಸರು. ಭವ ಬಂಧನ್ ನಾಟಕದ ಮೂಲಕ ಅವರ ಹೆಸರು ಲತಾ ಎಂದು ಬದಲಾಯಿತು. ಲತಾ ಮಂಗೇಶ್ವರ್ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಸಂಗೀತ ಸಾಧಕರಾಗಿದ್ದರು ಹಾಗೂ ಸಂಚಾರಿ ನಾಟಕ ತಂಡದ ಮಾಲೀಕರಾಗಿದ್ದರು. 1942ರಲ್ಲಿ ದೀನಾನಾಥ್ ನಿಧನರಾದರು. ತಂದೆಯ ಸಾವಿನ ಬಳಿಕ 13 ವರ್ಷದ ಬಾಲಕಿ ಲತಾ, ತನ್ನ ಕುಟುಂಬದ ನಿರ್ವಹಣೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಯಿತು. 1947ರಲ್ಲಿ ಮುಂಬೈ ನಗರಕ್ಕೆ ಬಂದು ನೆಲೆಸಿದ ಲತಾ ಮಂಗೇಶ್ಕರ್, 1948ರಲ್ಲಿ ಗುಲಾಮ್ ಹೈದರ್ ಸಂಗೀತ ನಿರ್ದೇಶನದ ಮಜ್ಬೂರ್ ಸಿನಿಮಾದಲ್ಲಿ ಹಾಡಿದರಾದರೂ, ಕಮಲ್ ಅಮ್ರೋಹಿ ನಿರ್ದೇಶನದ ಮಹಲ್ ಸಿನಿಮಾದ ಆಯೇಗಾ ಆನೆವಾಲಾ ಹಾಡು ಮಂಗೇಶ್ಕರ್ ಅವರ ಬದುಕಿನ ದಿಕ್ಕ ದೆಸೆಗಳನ್ನು ಬದಲಾಯಿಸಿ,
ಬಹು ಬೇಡಿಕೆಯ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದರು. ಸುಮಾರು 5 ದಶಕಗಳ ಕಾಲ ದಣಿವರಿಯದ ಲತಾ ಮಂಗೇಶ್ಕರ್ ಹಿನ್ನೆಲೆ ಗಾಯನವನ್ನು ಮುಂದುವರೆಸಿದರು. ಅನಿಲ್ ಬಿಸ್ವಾಸ್ , ನೌಷಾದ್, ಶಂಕರ್ ಜೈಕಿಶನ್ , ಸಿ. ರಾಮಚಂದ್ರ, ಎಸ್. ಡಿ. ಬರ್ಮನ್, ಮದನ್ ಮೋಹನ್, ರೋಶನ್ , ಸಲೀಲ್ ಚೌಧರಿ, ಹೇಮಂತ್ ಕುಮಾರ್, ವಸಂತ್ ದೇಸಾಯಿ ಹಾಗೂ ಇತರ ಸಂಗೀತ ಸಂಯೋಜಕರ ಮಾರ್ಗದರ್ಶನದಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಗಾಯನ ಕ್ಷೇತ್ರದ ದಂತಕಥೆಯ ಸ್ವರೂಪ ಪಡೆದುಕೊಂಡಿದ್ದರು. ಲತಾ ಮಂಗೇಶ್ಕರ್ ಹಿಂದಿ ಸಿನಿಮಾಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಹಾಡಿರುವ ಸಾರ್ವಕಾಲೀಕ ಶ್ರೇಷ ಹಾಡುಗಳಲ್ಲಿ ಅರ್ನಾಕಲಿ, ಮೊಘಲ್ ಎ ಆಝಾಮ್ , ಬೀಸ್ ಸಾಲ್ ಬಾದ್, ಪರಖ್, ವೋಹ್ ಕೌನ್ ಥಿ, ಪಾಕೀಝಾ, ಶೋರ್, ಹಮ್ ಆಪ್ ಕಿ ಹೈ ಕೌನ್ , ವೀರ್ ಝರಾ ಪ್ರಮುಖ ಸಿನಿಮಾಗಳಾಗಿವೆ. ಕನ್ನಡ ಸೇರಿದಂತೆ ಭಾರತದ ಸುಮಾರು 36 ಭಾಷೆಗಳಲ್ಲೂ ಹಾಡಿರುವ ಲತಾ ಅವರು, ಕನ್ನಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದ ಬೆಳ್ಳನೆ ಬೆಳಗಾಯಿತು ಹಾಡಿನ ಮೂಲಕ ಕನ್ನಡವನ್ನು ತಮ್ಮ ಹಾಡುಗಳ ಭಾಷೆಯಾಗಿ ಸೇರಿಸಿಕೊಂಡಿದ್ದರು.
ಲತಾ ಮಂಗೇಶ್ಕರ್ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ, ಫಿಲಂ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ದೇಶ-ವಿದೇಶ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಫ್ರಾನ್ಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಹಾಗೂ ಆರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಗಳು ಕೂಡ ಅವರಿಗೆ ಸಂದಿವೆ. ತಾವು ಹಾಡುವ ಪ್ರತಿಯೊಂದು ಹಾಡಿನ ಪದಗಳಲ್ಲಿ ಅಡಗಿರುವ ಭಾವನೆಗಳು ಕೇಳುಗರ ಮನಮುಟ್ಟುವಂತೆ ಹಾಡುತ್ತಿದ್ದ ಲತಾ ಮಂಗೇಶ್ಕರ್ ಅವರದ್ದು ಸ್ಪಷ್ಟ ಉಚ್ಚಾರಣೆ ಹಾಗೂ ಮಾಧುರ್ಯ ಪೂರ್ಣ ಕಂಠವಾಗಿತ್ತು. ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಮೌಲ್ಯಯುತ ಸ್ಥಾನಮಾನ ತಂದುಕೊಟ್ಟ ಶ್ರೇಯಸ್ಸು ಲತಾ ಅವರಿಗೆ ಸಲ್ಲುತ್ತದೆ. ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಭಾಗವಾಗಿದ್ದ ಲತಾ ಮಂಗೇಶ್ಕರ್ ಅವರ ಹೆಸರು ಎಂದಿಗೂ ಚಿರಸ್ಥಾಯಿಯಾಗಿ ಉಳಿಯಲಿದೆ.