ಬೆಂಗಳೂರು: ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ಕೈಮಗ್ಗ ಉತ್ಪನ್ನಗಳ ಮಾರಾಟ ಮೇಳ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟಿಸಿದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ , ತೋಟಗಾರಿಕಾ ಸಚಿವ ಮುನಿರತ್ನ ಮತ್ತಿತರರು ಉಪಸಸ್ಥಿತರಿದ್ದರು.
ಕೈಮಗ್ಗ ನೇಕಾರರ ಮಳಿಗೆಗಳಿಗೆ ಗಣ್ಯರು ಭೇಟಿ ನೀಡಿ ಉತ್ಪನ್ನಗಳನ್ನು ಪರಿಶೀಲಿಸಿದರು.
ಬಳಿಕ ಮುಖ್ಯಮಂತ್ರಿ , ಅತಿ ಹೆಚ್ಚು ಉದ್ಯೋಗ ನೀಡುವ ಜವಳಿ ಕ್ಷೇತ್ರಕ್ಕೆ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಲಿದೆ. ರಾಜ್ಯ ಸರ್ಕಾರ 32 ಸಾವಿರ ಮಹಿಳಾ ಸ್ವಸಹಾಯ ಸಂಘಗಳಿಗೆ 1.5 ಲಕ್ಷ ರೂಪಾಯಿ ನೆರವು ಹಾಗೂ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ಒದಗಿಸುತ್ತಿದ್ದು, ಇದರಲ್ಲಿ ನೇಕಾರ ಸಮುದಾಯಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಡಿ ನೇಕಾರ ಕುಟುಂಬದ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಕೈಗಾರಿಕಾ ವಲಯದಲ್ಲಿ ನೇಕಾರ ಸನ್ಮಾನ ಯೋಜನೆಯಡಿ ನೀಡುವ ಅನುದಾನವನ್ನು 5 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ನೇಕಾರ ಸಮುದಾಯಕ್ಕೆ ಬಡ್ಡಿ ರಿಯಾಯಿತಿ ಘೋಷಿಸಲಾಗಿದೆ. ಒಟ್ಟಾರೆ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೈಮಗ್ಗಗಳು ಸ್ವಾಭಿಮಾನದ ಸಂಕೇತವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖಪಾತ್ರ ವಹಿಸಿದೆ. ಹೆಚ್ಚು ಉತ್ಪಾದನೆಗಿಂತ ಹೆಚ್ಚು ಜನರಿಂದ ಉತ್ಪಾದನೆಯಾಗುವುದು ಅಗತ್ಯ ಎಂಬುದು ಮಹಾತ್ಮ ಗಾಂಧಿ ಅವರ ಕಲ್ಪನೆಯಾಗಿದ್ದು, ಹೀಗಾಗಿ ಆತ್ಮನಿರ್ಭರ ಭಾರತದ ಕನಸು ನನಸಾಗಲು ಕೈಮಗ್ಗಗಳ ಉತ್ಪಾದನೆ ಹೆಚ್ಚಾಗಬೇಕು ಎಂದರು.
–Follow us on DailyHunt