ಶಿವಮೊಗ್ಗ :ರಾಜ್ಯಕ್ಕೆ ಒಂದು ದಿನದ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ, ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ, ಕೋಟೆ ಗಂಗೂರು ರೈಲ್ವೆ ಕೋಚಿಂಗ್ ಡಿಪೋ ಹಾಗೂ 953 ಕೋಟಿ ರೂಪಾಯಿ ವೆಚ್ಚದ ಜಲಜೀವನ್ ಮಿಷನ್ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಡಿಕೆ ಹಾರ ಹಾಕಿ, ಶಾಲು ಹೊದಿಸಿ, ಗೌರವಿಸಲಾಯಿತು. 80 ವರ್ಷ ಪೂರೈಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ಶಾಲು ಹೊದಿಸಿ, ಸಾಂಕೇತಿಕ ನೇಗಿಲು ನೀಡಿ ಗೌರವಿಸಿದರು.
ಬಳಿಕ ಪ್ರಧಾನಿ, ನಾವು ನೈಸರ್ಗಿಕ ಮತ್ತು ಔದ್ಯೋಗಿಕ ಪ್ರಗತಿಯ ಜೊತೆಗೆ, ಕೇಂದ್ರ, ರಾಜ್ಯ ಸರ್ಕಾರದ ಸಮನ್ವಯತೆಯಿಂದ ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗಿದೆ. ರೈಲ್ವೆ, ಹೆದ್ದಾರಿ, ವೈಮಾನಿಕ ಕ್ಷೇತ್ರದಲ್ಲಿ ಸಂಪರ್ಕ ಕ್ರಾಂತಿಯಾಗಿದೆ. ಇಂದು ನವಭಾರತದ ಸಬ್ ಕಾ ವಿಕಾಸ್ ಮತ್ತು ಸಬ್ ಕಾ ಪ್ರಯಾಸ್ ಯೋಜನೆ ಅನುಷ್ಠಾನದಿಂದ ರಾಜ್ಯದ ಸಾಕಷ್ಟು ಪ್ರತಿಯೊಂದು ನಗರಗಳಿಗೂ ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. ದೇಶದಲ್ಲಿ ಕಳೆದ 9 ವರ್ಷಗಳ ಹಿಂದೆ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ನಮ್ಮ ಸರ್ಕಾರದ ಕಳೆದ ಮುಂದುವರಿಕೆಯಿಂದ ಮತ್ತೆ 74 ವಿಮಾನ ನಿಲ್ದಾಣಗಳು ಕಾರ್ಯರೂಪಕ್ಕೆ ಬಂದು ಪ್ರತಿಯೊಂದು ಚಿಕ್ಕ ನಗರಗಳಿಗೂ ವಿಮಾನಯಾನ ಸೇವೆಯನ್ನು ಒದಗಿಸಿದ್ದೇವೆ ಎಂದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದ ನೂತನ ವಿಮಾನ ನಿಲ್ದಾಣದ ವಿನ್ಯಾಸವನ್ನು ವೀಕ್ಷಿಸಿದರು.

ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶದ ಆರ್ಥಿಕ ಸದೃಢತೆಗೆ ಕರ್ನಾಟಕದ ಕೊಡುಗೆ ಗಣನೀಯವಾಗಿದೆ. ವಿದೇಶಿ ಹೂಡಿಕೆ ತಂತ್ರಜ್ಞಾನ, ಸಂಶೋಧನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಅಭಿವೃದ್ಧಿ ಕ್ರಾಂತಿ ಸಾಧಿಸಿದೆ ಎಂದರು. ಜಿ-20 ಅಧ್ಯಕ್ಷ ಸ್ಥಾನ, ಜಗತ್ತಿನ ದೃಷ್ಟಿ ಕೇಂದ್ರೀಕರಿಸಿರುವ ದೇಶದ ಆರ್ಥಿಕತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆ ಕಾರಣ. ಕಳೆದ 10 ವರ್ಷಗಳಲ್ಲಿ ಕೇವಲ ಹೆದ್ದಾರಿಗಳ ಅಭಿವೃದ್ಧಿಗೆ ಕರ್ನಾಟಕಕ್ಕೆ 64 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದು, ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯ ಮತ್ತು ಅಭಿವೃದ್ಧಿಗೆ ಸಾಕ್ಷಿ ಎಂದರು. ಬಿ.ಎಸ್. ಯಡಿಯೂರಪ್ಪ, ಶಿವಮೊಗ್ಗ ವಿಮಾನ ನಿಲ್ದಾಣ ಆರಂಭವಾಗಿರುವುದರಿಂದ ಮಲೆನಾಡಿನ ಜನರ ಕನಸು ನನಸಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ್ದು, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾಗೆ ಅವರು ಪ್ರೇರಣೆಯಾಗಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿಯೂ ಪಟ್ಟಣದ ಸವಲತ್ತುಗಳು ದೊರೆಯುವಂತಾಗಬೇಕು ಎಂಬುದು ಪ್ರಧಾನಿ ಅವರ ಆಶಯವಾಗಿದೆ ಎಂದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಆರಗ ಜ್ಞಾನೇಂದ್ರ, ವಿ. ಸೋಮಣ್ಣ, ಸಿ.ಸಿ. ಪಾಟೀಲ್, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.