ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಇಳಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 8 ರೂಪಾಯಿ , ಡೀಸೆಲ್ ಗೆ 6 ರೂಪಾಯಿ ಅಬಕಾರಿ ಸುಂಕ ಇಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಇದರಿಂದಾಗಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆ 9.50 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 7 ರೂಪಾಯಿ ಕಡಿಮೆಯಾಗಲಿದೆ. ಇದರಿಂದ ಕೇಂದ್ರಕ್ಕೆ ಪ್ರತಿವರ್ಷ ಒಂದು ಲಕ್ಷ ಕೋಟಿ ಹೊರೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಅಡುಗೆ ಸಿಲಿಂಡರ್ ಗೆ 200 ರೂಪಾಯಿ ಸಹಾಯಧನವನ್ನು ಘೋಷಿಸಲಾಗಿದ್ದು, 9 ಕೋಟಿ ಫಲಾನುಭವಿಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಈ ಕ್ರಮಗಳಿಂದ ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಂತಾಗಿದೆ.