ಬೆಂಗಳೂರು: ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದ ಆವರಣದಲ್ಲಿರುವ ಬಾಬುಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯ ಸೇವೆ ಸಲ್ಲಿಸಿದವರಿಗೆ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಬಾಬು ಜಗಜೀವನ್ ರಾಮ್ ಸಂವಿಧಾನದ ಸಮರ್ಥ ಅನುಷ್ಠಾನಕ್ಕೆ ಕಾರಣೀಭೂತರು. ಆಹಾರದ ಕೊರತೆ ಅನುಭವಿಸುತ್ತಿದ್ದ ದೇಶಕ್ಕೆ ಹಸಿರು ಕ್ರಾಂತಿಯ ಮೂಲಕ 4 ವರ್ಷದಲ್ಲೇ ಆಹಾರ ಸ್ವಾವಲಂಬನೆ ತಂದುಕೊಟ್ಟರು. ಸ್ವಾಭಿಮಾನದಿಂದ ಧೈರ್ಯವಾಗಿ ಬದುಕುವುದಕ್ಕೆ ಮಾದರಿಯಾಗಿದ್ದಾರೆ ಎಂದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಭೂ ಒಡೆತನದ ಯೋಜನೆಯ ಘಟಕ ವೆಚ್ಚವನ್ನು 15ರಿಂದ 20 ಲಕ್ಷ ರೂಪಾಯಿವರೆಗೆ ಹೆಚ್ಚಿಸಲಾಗುತ್ತಿದೆ. ಶಿಕ್ಷಣದ ಜೊತೆಗೆ ಜಾಗತಿಕ ಸ್ಪರ್ಧೆಗನುಗುಣವಾಗಿ 8 ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಮಾರ್ಗದರ್ಶಿ ವೇದಿಕೆಯಿಂದ ಸೂಕ್ತ ತರಬೇತಿ ಕೊಡಿಸಲಾಗುವುದು ಎಂದರು. ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನವೋದ್ಯಮದ ಬೆಂಬಲಕ್ಕೆ ಎಸ್ಟಿ ಎಸ್ಸಿ ಸಮುದಾಯದವರಿಗೆ 50 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತಿದೆ. ಬಾಬು ಜಗಜೀವನರಾಮ್ ಸ್ವಯಂ ಉದ್ಯೋಗ ಯೋಜನೆಯನ್ನು ಘೋಷಿಸಲಾಗಿದ್ದು, 1 ತಿಂಗಳಲ್ಲೇ ರೂಪುರೇಷೆ ತಯಾರಿಸಿ ಅನುದಾನ ಬಿಡುಗಡೆ ಮಾಡಲಾಗುವುದು. ವಸತಿ ಯೋಜನೆಯ ಘಟಕ ವೆಚ್ಚ ಸಹಾಯಧನವನ್ನು 1 ಲಕ್ಷ 75 ಸಾವಿರದಿಂದ 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗುವುದು. ಕುಟೀರಜ್ಯೋತಿ ಯೋಜನೆಯಡಿ ವಿದ್ಯುತ್ ಬಳಕೆಯ ಪ್ರಮಾಣವನ್ನು 40ರಿಂದ 75 ಯುನಿಟ್ ಗೆ ಹೆಚ್ಚಿಸಲಾಗುವುದು. ಇದರ ಹೊರತಾಗಿ ಎಸ್ಸಿ ಎಸ್ಟಿ ಸಮುದಾಯದ ಸರ್ವರಿಗೂ 75 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ನಿರ್ಧರಿಸಲಾಗಿದೆ. ನೇರ ನಗದು ವರ್ಗಾವಣೆ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.

ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಸಿ.ಸಿ. ಪಾಟೀಲ್, ವಿಧಾನಪರಿಷತ್ ಸದಸ್ಯ ಆ. ದೇವೇಗೌಡ, ಸಲಹೆಗಾರರಾದ ವೆಂಕಟಯ್ಯ, ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.