ವಿಜಯಪುರ: ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧವಾಗಿದ್ದ ಆಧ್ಯಾತ್ಮಿಕ ಚಿಂತಕ, ಪ್ರವಚನಕಾರ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನಿನ್ನೆ ಸಂಜೆ 6.05ಕ್ಕೆ ಲಿಂಗೈಕ್ಯರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಶ್ರಮದಲ್ಲೇ ಬಿಎಲ್‌ಡಿಇ ಆಸ್ಪತ್ರೆಯ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದರು.
ಎರಡು ದಿನಗಳಿಂದ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶ್ರೀಗಳ ಅಗಲಿಕೆ ವಿಷಯ ತಿಳಿಯುತ್ತಿರುವಂತೆ ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರು, ಭಕ್ತರ ದಂಡು ಆಶ್ರಮದತ್ತ ಧಾವಿಸುತ್ತಿದ್ದು, ಕಂಬನಿ ಮಿಡಿಯುತ್ತಿದ್ದಾರೆ.
ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಜೆ 6.5ಕ್ಕೆ ಸರ್ಕಾರದ ಸಕಲ ಗೌರವಗಳೊಂದಿಗೆ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ.
‘ಗುಡಿ ಕಟ್ಟಬಾರದು, ಸಮಾಧಿ ಮಾಡಬಾರದು’ ಎಂಬ ಶ್ರೀಗಳ ಆಶಯದಂತೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.
ಅಂತ್ಯಸಂಸ್ಕಾರದಲ್ಲಿ ಮಠಾಧೀಶರು, ಗಣ್ಯರು, ಮಾಧ್ಯಮದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ .
ಆಶ್ರಮದ ಶಿಷ್ಯ ವರ್ಗ, ನಾಡಿನ ಹಿರಿಯ ಮಠಾಧೀಶರು, ಗಣ್ಯರು ಶ್ರೀಗಳ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನಡೆಸಲು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ.
ಸಿದ್ದೇಶ್ವರ ಶ್ರೀಗಳ ಅಗಲಿಕೆಯ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಾದ್ಯಂತ ಇಂದು ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿಲಾಗಿದೆ.

ಶ್ರೀಗಳ ಅಗಲಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಸಿದ್ದೇಶ್ವರ ಶ್ರೀಗಳು ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಅರ್ಪಿಸಿದ್ದರು. ಸಮಾಜದ ಎಲ್ಲ ವರ್ಗದ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದರು ಎಂದು ತಮ್ಮ ಟ್ವೀಟ್ ನಲ್ಲಿ ಸ್ಮರಿಸಿ, ಸಂತಾಪ ಸೂಚಿಸಿದ್ದಾರೆ.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಟ್ವೀಟ್ ಸಂದೇಶದಲ್ಲಿ ದೇಶ ಕಂಡ ಶ್ರೇಷ್ಟ ಸಂತರು,ಆಧ್ಯಾತ್ಮಿಕ ಪ್ರವಚನಕಾರ,ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟುಮಾಡಿದೆ. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ,ಅವರ ಭಕ್ತ ಸಮೂಹಕ್ಕೆ ಈ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
_CLICK to Follow-Support us on DailyHunt