ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಎರಡು ದಿನಗಳ ಅಧಿಕೃತ ಭಾರತ ಭೇಟಿಗಾಗಿ ಇಂದು ದೆಹಲಿಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ಹಿತಾಸಕ್ತಿ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಭಾರತ ಮತ್ತು ಜಪಾನ್ ಕ್ರಮವಾಗಿ ಜಿ 20 ಮತ್ತು ಜಿ 7 ರ ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ ಈ ವರ್ಷ ವಿಶಿಷ್ಟವಾಗಿದೆ. ಆದ್ಯತೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಇದು ಉತ್ತಮ ಅವಕಾಶವಾಗಿದೆ ಎಂದರು. 2019 ರಲ್ಲಿ, ಭಾರತ-ಜಪಾನ್ ಸ್ಪರ್ಧಾತ್ಮಕ ಪಾಲುದಾರಿಕೆಯನ್ನು ಸ್ಥಾಪಿಸಲಾಯಿತು. ಇದರ ಅಡಿಯಲ್ಲಿ, ಎರಡೂ ದೇಶಗಳು ಲಾಜಿಸ್ಟಿಕ್ಸ್, ಆಹಾರ ಸಂಸ್ಕರಣಾ ಸಮಸ್ಯೆಗಳು ಮತ್ತು M S M E ಗಳ ಮೇಲೆ ಕೇಂದ್ರೀಕರಿಸಿವೆ ಎಂದು ಪ್ರಧಾನಿ ಹೇಳಿದರು.
ಉಭಯ ದೇಶಗಳ ನಡುವಿನ ಚರ್ಚೆ ಮತ್ತು ಸಮಾಲೋಚನೆಗಳ ಸರಣಿಯು ಮುಂದುವರಿಯುತ್ತದೆ. ಇದು ಉಭಯ ದೇಶಗಳ ಬಾಂಧವ್ಯ ಮತ್ತಷ್ಟು ಬಲಗೊಳ್ಳಲು ಸಹಕಾರಿಯಾಗಲಿದೆ ಎಂದ ಪ್ರಧಾನಿ, ಈ ವರ್ಷದ ಕೊನೆಯಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಜಪಾನ್ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.
ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ, ಭಾರತ ಮತ್ತು ಜಪಾನ್ ನಡುವಿನ ಸಂಬಂಧವನ್ನು ಇನ್ನಷ್ಟು ವೃದ್ಧಿಸಲು ಈ ಚರ್ಚೆ ಸಹಕಾರಿಯಾಗಿದೆ ಎಂದರು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಬೆಳೆಸುವಲ್ಲಿ ಭಾರತ-ಜಪಾನ್ ಪಾಲುದಾರಿಕೆಯ ಪಾತ್ರದ ಕುರಿತು ಚರ್ಚಿಸಲಾಯಿತು ಎಂದ ಪ್ರಧಾನಿ ಕಿಶಿದಾ, ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯನ್ನು ಶ್ಲಾಘಿಸಿದರು.
ಇದಕ್ಕೂ ಮೊದಲು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜಪಾನ್ ಪ್ರಧಾನಿ ಅವರನ್ನು ಸ್ವಾಗತಿಸಿದರು. ಬಳಿಕ ಫುಮಿಯೊ ಕಿಶಿದಾ, ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
2014 ರಲ್ಲಿ ಭಾರತ – ಜಪಾನ್ ಸಂಬಂಧವನ್ನು ವಿಶೇಷ ತಾಂತ್ರಿಕ ಮತ್ತು ಜಾಗತಿಕ ಪಾಲುದಾರಿಕೆ ಮಟ್ಟಕ್ಕೆ ಕೊಂಡೊಯ್ಯಲಾಗಿತ್ತು. ರಕ್ಷಣೆ, ಭದ್ರತೆ, ವ್ಯಾಪಾರ, ಹೂಡಿಕೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಹಾಗೂ ಆರೋಗ್ಯ ಮೊದಲಾದ ವಲಯಗಳು ಪಾಲುದಾರಿಕೆಯಡಿ ಸೇರಿವೆ.
_Follow us on GoogleNews