ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಗರೋತ್ಥಾನ 3ನೇ ಹಂತದ ವಿವಿಧ ಕಾಮಗಾರಿಗಳಿಗೆ ಇಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಕೆ. ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎನ್.ಎಚ್. ಶಿವಶಂಕರ ರೆಡ್ಡಿ, ಜಿ.ಪಂ ಅಧ್ಯಕ್ಷರಾದ ಎಂ.ಬಿ.ಚಿಕ್ಕನರಸಿಂಹಯ್ಯ, ತಾ.ಪಂ ಅಧ್ಯಕ್ಷರಾದ ಆರ್.ಲೋಕೇಶ್ ಇತರರು ಹಾಜರಿದ್ದರು.

ಗೌರಿಬಿದನೂರು ನಗರಸಭಾ ನಿಧಿಯಿಂದ ಬಡರೋಗಿಗಳಿಗೆ ರೂ.5000 ಸಹಾಯಧನದ ಚೆಕ್, ಆಶ್ರಯ ಯೋಜನೆಯಡಿ ವಸತಿರಹಿತ ನಗರವಾಸಿಗಳಿಗೆ ಉಚಿತ ನಿವೇಶನಗಳ ಹಕ್ಕುಪತ್ರಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ಮಾನ್ಯ ಸಚಿವರಾದ ಡಾ.ಸುಧಾಕರ್ ಕೆ. ವಿತರಿಸಿದರು.

ಮಂಚೇನಹಳ್ಳಿ ಹೋಬಳಿ ಕೇಂದ್ರದಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ, ಮನಸ್ವಿನಿ ಹಾಗೂ ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಒಟ್ಟು 253 ಜನರಿಗೆ ಪಿಂಚಣಿ ಆದೇಶ ಪ್ರತಿಗಳನ್ನು ಮಾನ್ಯ ಸಚಿವರಾದ ಡಾ.ಸುಧಾಕರ್ ಕೆ. ವಿತರಿಸಿದರು.

ದ್ವಾರಗಾನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಪರಿವೀಕ್ಷಣೆ ನಡೆಸಿದ ಮಾನ್ಯ ಸಚಿವರು, ಅಲ್ಲಿ ಅವರ ಗಮನಕ್ಕೆ ಬಂದ ಕಳಪೆ ಕಾಮಗಾರಿಯ ವಿರುದ್ಧ ತನಿಖೆಗೆ ಆದೇಶ ನೀಡಿದರು ಅಲ್ಲದೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು.

ಮಿಣಕನಗುರ್ಕಿ ಹಾಗೂ ಜರಬಂಡಹಳ್ಳಿ ಗ್ರಾಮಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ತಲಾ ರೂ.12.0 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಲ್ಮೀಕಿ ಸಮುದಾಯ ಭವನಗಳನ್ನು ಮಾನ್ಯ ಸಚಿವರು ಉದ್ಘಾಟಿಸಿದರು.


ಗೌರಿಬಿದನೂರು ತಾಲ್ಲೂಕಿನ ಶ್ಯಾಂಪುರ ಪಂಚಾಯತಿಯ ಮರಿಮಾಕಲಹಳ್ಳಿಯಲ್ಲಿ ಕೃಷಿ ಚಟುವಟಿಕೆಗೆ ಬಳಸುವ ಮಾನ್ಯುಯಲ್ ಫೀಡರ್ ಯಂತ್ರವನ್ನು ತಾವೇ ಸ್ವತಃ ವಿನ್ಯಾಸಗೊಳಿಸಿ ನಿರ್ಮಿಸಿರುವ ದೇವರಾಜ್ ಅವರಿಗೆ ಅಭಿನಂದನೆಗಳನ್ನು ಮಾನ್ಯ ಸಚಿವರು ಸೂಚಿಸಿ, “ಕೃಷಿಯಲ್ಲಿ ಕಡಿಮೆ ವೆಚ್ಚದ ತಂತ್ರಜ್ಞಾನ ಅಳವಡಿಸಿಳಿಕೊಳ್ಳುವ ಮೂಲಕ ದೇವರಾಜ್ ಅವರು ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ” ಎಂದು ಮೆಚ್ಚುಗೆ ಸೂಚಿಸಿದರು.

ಕರ್ನಾಟಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಿಗಮ (ಪಿ.ಎಂ.ಜಿ.ಎಸ್.ವೈ) ವತಿಯಿಂದ ರೂ.225 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಮರಿಮಾಕಲಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿವೀಕ್ಷಿಸಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಗ್ರಾಮಸ್ಥರ ಅಭಿಪ್ರಾಯವನ್ನು ಮಾನ್ಯ ಸಚಿವರು ಪಡೆದರು.
