ಗುಜರಾತ್: ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಗಾಂಧಿನಗರದ ಸಮೀಪ ನಿರ್ಮಿಸಿರುವ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ನಂತರ, ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರಧಾನಿ ಪ್ರದಾನ ಮಾಡಿದರು.
ನಂತರ ಘಟಿಕೋತ್ಸವ ಭಾಷಣ ಮಾಡಿದ ಅವರು, ರಕ್ಷಣಾ ವಲಯ ಎಂದರೆ ಕೇವಲ ರಕ್ಷಣೆಗೆ ಸಂಬಂಧಿಸಿದ ವಿಷಯವಾಗಿರದೆ ಇದು ತುಂಬಾ ವಿಸ್ತೃತವಾಗಿದೆ. ಈ ವಲಯದಲ್ಲಿ ತರಬೇತಿ, ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಆರಂಭವಾಗಿದೆ. ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ರಕ್ಷಣಾ ವಲಯಕ್ಕೆ ಮತ್ತಷ್ಟು ತಮ್ಮದೇ ಕೊಡುಗೆ ನೀಡುವ ನಿರೀಕ್ಷೆ ಇದೆ ಎಂದರು ಇದಕ್ಕೂ ಮುನ್ನ ಅಮಿತ್ ಶಾ ಮಾತನಾಡಿ, ಗುಜರಾತ್ ನಲ್ಲಿ ಪ್ರತಿಷ್ಠಿತ ರಕ್ಷಣಾ ವಿಶ್ವವಿದ್ಯಾಲಯ, ವಿಧಿ- ವಿಜ್ಞಾನ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ವಿಧಿ ವಿಜ್ಞಾನ ವಿಶ್ವವಿದ್ಯಾಲಯಗಳ 7 ರಾಜ್ಯಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಮೂರು ರಾಜ್ಯಗಳಲ್ಲಿ ಕ್ಯಾಂಪಸ್ ಗಳನ್ನು ಆರಂಭಿಸಿದೆ. ಅದೇ ರೀತಿ ರಕ್ಷಣಾ ವಿಶ್ವವಿದ್ಯಾಲಯ ಸಹ ಇತರ ರಾಜ್ಯಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮತ್ತಷ್ಟು ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ಇದಕ್ಕೂ ಮುನ್ನ ಪ್ರಧಾನಿ ಅವರು ವಿಶ್ವವಿದ್ಯಾಲಯದವರೆಗೆ ಬೃಹತ್ ರೋಡ್ ಶೋ ನಡೆಸಿದರು. ಇಂದು ಸಂಜೆ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಖೇಲ್ ಮಹಾಕುಂಭವನ್ನು ಉದ್ಘಾಟಿಸಲಿದ್ದಾರೆ. 2010ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಖೇಲ್ ಮಹಾಕುಂಭ ಆರಂಭಿಸಿದ್ದರು. ಈ ಮಧ್ಯೆ ಶುಕ್ರವಾರ ಸೋಮನಾಥ ದೇವಾಲಯ ಟ್ರಸ್ಚ್ ನ ಸಭೆಯಲ್ಲಿ ಪ್ರಧಾನಿ ಪಾಲ್ಗೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ಮಾಜಿ ಉಪ ಪ್ರಧಾನಿ ಲಾಲಕೃಷ್ಣ ಆಡ್ವಾಣಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಸೋಮನಾಥ ಮಂದಿರದ ಅಭಿವೃದ್ಧಿ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭವಿಷ್ಯದ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸುವ ಕುರಿತು ಟ್ರಸ್ಟ್ ನ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆಡ್ವಾಣಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದು ಅದ್ಭುತವಾಗಿತ್ತು ಎಂದು ಹೇಳಿದ್ದಾರೆ. ಟ್ರಸ್ಟ್ ಸಭೆಯಲ್ಲಿ ಯಾತ್ರಿಕರು ಮತ್ತು ಪ್ರವಾಸಿಗರಿಗೆ ಆಗತ್ಯ ಮೂಲ ಸೌಕರ್ಯ ಉನ್ನತೀಕರಣ ಕುರಿತು ಚರ್ಚಿಸಿದ್ದೇವೆ. ಸೋಮನಾಥ ಕ್ಷೇತ್ರವನ್ನು ಆದರ್ಶ ತೀರ್ಥ ಕ್ಷೇತ್ರವಾಗಿ ರೂಪಿಸಲು ಟ್ರಸ್ಟ್ ಅನೇಕ ಪ್ರಯತ್ನಗಳನ್ನು ನಡೆಸಿದೆ ಎಂದಿದ್ದಾರೆ.
ಜಾಹೀರಾತು: ಲಿಂಗಸಗೂರು ಪಟ್ಟಣದಲ್ಲಿ ಹೊಸದಾಗಿ ಪ್ರಾರಂಭವಾಗಿರುವ “ಸಮೃದ್ಧಿ ಹಾರ್ಡವೇರ್ & ಪೇಂಟ್ಸ್ ! ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಾರ್ಡವೇರ್ ಸಾಮಗ್ರಿಗಳು ಮತ್ತು ಪೇಂಟ್ಸ್ !.

ಈ ಸಂದರ್ಭದಲ್ಲಿ ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ , ಭುಪೇಂದ್ರಬಾಯ್ ಪಟೇಲ್ ಉಪಸ್ಥಿತರಿದ್ದರು.