ರಾಜ್ಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರದಾನ ಮಾಡುವ 2021ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಎ.ವಿ. ಆನಂದ್ ಆಯ್ಕೆಯಾಗಿದ್ದಾರೆ. ನಾಳೆ ನಡೆಯಲಿರುವ ಮೈಸೂರು ದಸರಾ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹಾವೇರಿ: “ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಮಾದರಿ ನೀತಿಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ನೀತಿಸಂಹಿತೆ ಮತ್ತು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ಆ ಸಮಯದಿಂದಲೇ ಯಾವುದೇ ಪ್ರಚಾರ ಮುಂದುವರೆಸಲು ಅವಕಾಶ ನೀಡುವುದಿಲ್ಲ” – ಜಿಲ್ಲಾಧಿಕಾರಿ ಸಂಜಯ್ ಶೆಟ್ಟಣ್ಣವರ್.
ಅಂತರಾಜ್ಯ: ಮಹಾರಾಷ್ಟ್ರದ ಶಿರಡಿ ಸಾಯಿ ಬಾಬಾ ದೇವಸ್ಥಾನ ಮತ್ತು ಶನಿ ಶಿಂಗ್ನಾಪುರ ದೇವಸ್ಥಾನ ಅಕ್ಟೋಬರ್ 7 ರಿಂದ ಭಕ್ತರಿಗಾಗಿ ಮತ್ತೆ ತೆರೆಯಲಿದೆ. “ಒಂದು ದಿನದಲ್ಲಿ, ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಕೇವಲ 15,000 ಭಕ್ತರಿಗೆ ಮತ್ತು ಶನಿ ಶಿಂಗ್ನಾಪುರ ದೇವಸ್ಥಾನದಲ್ಲಿ 20,000 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು” ಎಂದು ಅಹ್ಮದ್ ನಗರ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಬಿ ಭೋಸಲೆ.
ಚಾರ್ದಾಮ್ ಯಾತ್ರೆಗಾಗಿ ಉತ್ತರಾಖಂಡ್ ಸರ್ಕಾರ ಹೊಸ ಎಸ್‌ಒಪಿ ಪ್ರಕಟಿಸಿದೆ. ಇದರನ್ವಯ ಸ್ಥಳೀಯರು ಯಾತ್ರೆ ಕೈಗೊಳ್ಳಲು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲ. ಹೊರ ರಾಜ್ಯದ ಪ್ರಯಾಣಿಕರು ಮಾತ್ರ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ. 2ನೇ ಡೋಸ್ ಲಸಿಕೆ ಪಡೆದ 15 ದಿನಗಳ ನಂತರ ಭಕ್ತರು ಯಾತ್ರೆಯಲ್ಲಿ ಕೈಗೊಳ್ಳಬಹುದಾಗಿದೆ.
ಟ್ವೀಟ್ ಕಾರ್ನರ್: ಫಿಟ್ನೆಸ್ ಪರೀಕ್ಷೆ/15 ವರ್ಷಕ್ಕಿಂತ ಹಳೆಯ ಮೋಟಾರ್ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ನವೀಕರಣ ಶುಲ್ಕದಲ್ಲಿ ಹೆಚ್ಚಳ ಇರುತ್ತದೆ; 15 ವರ್ಷಕ್ಕಿಂತ ಹಳೆಯ ಸಾರಿಗೆ ವಾಹನಗಳಿಗೆ ಫಿಟ್ನೆಸ್ ಪ್ರಮಾಣೀಕರಣ ಶುಲ್ಕದಲ್ಲಿ ಹೆಚ್ಚಳ. 15 ವರ್ಷಕ್ಕಿಂತಲೂ ಹಳೆಯದಾದ (ಸಾರಿಗೆ ರಹಿತ) ವಾಹನಗಳ ನೋಂದಣಿ ಶುಲ್ಕದ ನವೀಕರಣದಲ್ಲಿ ಹೆಚ್ಚಳವಾಗಲಿದೆ. _ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ.
ಕ್ರೀಡೆ: ಕೋವಿಡ್ ಬಿಕ್ಕಟ್ಟು ಮತ್ತು ದೇಶದ ನಾಗರಿಕರಿಗೆ ಇಂಗ್ಲೆಂಡ್ ನಲ್ಲಿ ಹೇರಲಾಗಿರುವ ಕ್ವಾರಂಟೈನ್ ನಿಯಮಗಳಲ್ಲಿನ ತಾರತಮ್ಯವನ್ನು ಉಲ್ಲೇಖಿಸಿ ಭಾರತ 2022ರ ಕಾಮನ್ವೆಲ್ತ್ ಗೇಮ್ಸ್ ಹಾಕಿ ಸ್ಪರ್ಧೆಯಿಂದ ಹಿಂದೆ ಸರಿದಿದೆ.
ಅಬುಧಾಬಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಕೈಗಾರಿಕೆ – ವಾಣಿಜ್ಯ: ಕೇಂದ್ರ ಕಲ್ಲಿದ್ದಲು ಸಚಿವಾಲಯ 1960ರ ಖನಿಜ ವಿನಾಯಿತಿ ನಿಯಮಾವಳಿಗಳಿಗೆ ತಿದ್ದುಪಡಿ ತಂದಿದ್ದು, ನಿರ್ಬಂಧಿತ ಗಣಿಗಳಲ್ಲಿ ಶೇಕಡ 50 ರಷ್ಟು ಕಲ್ಲಿದ್ದಲು ಹಾಗೂ ಕಂದು ಕಲ್ಲಿದ್ದಲನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.
ಅಡಿಗೆ ಅನಿಲ ಸಿಲಿಂಡರ್ ದರದಲ್ಲಿ ಮತ್ತೆ 15 ರೂ. ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 902 ರೂ. 50 ಪೈಸೆಗೆ ಏರಿಕೆಯಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಅನ್ವಯವಾಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲೂ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ 106.52 ಹಾಗೂ ಡೀಸೆಲ್ 97.03 ರೂಪಾಯಿಗೆ ಹೆಚ್ಚಳಗೊಂಡಿದೆ.
ಅಪಾರ್ಟ್‌ಮೆಂಟ್ ಸಮುಚ್ಛಯಗಳಲ್ಲಿನ ಫ್ಲ್ಯಾಟ್ ಖರೀದಿ ಉತ್ತೇಜಿಸಲು ಕರ್ನಾಟಕ ರಾಜ್ಯ ಸರ್ಕಾರ 45 ಲಕ್ಷದವರೆಗಿನ ಮೌಲ್ಯದ ಫ್ಲ್ಯಾಟ್ ಮುದ್ರಾಂಕ ಶುಲ್ಕವನ್ನು ಶೇಕಡ 5 ರಿಂದ 3ಕ್ಕೆ ಇಳಿಸಿದೆ.
