ರಾಜ್ಯದ ಪ್ರಮುಖ ಸುದ್ದಿಗಳು:
- ಉತ್ತರ ಕನ್ನಡ: ಜಿಲ್ಲೆಯ ಗೋಕರ್ಣದಲ್ಲಿ ನಿನ್ನೆ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ‘ಸ್ವಚ್ಛ ಸಮುದ್ರ- ನಮ್ಮ ಸಮುದ್ರ ಹಾಗೂ ಪ್ಲಾಸ್ಟಿಕ್ ಮುಕ್ತ ಕರಾವಳಿ ತೀರ’ ಘೋಷವಾಕ್ಯದೊಂದಿಗೆ ಕಡಲತೀರ ಶುದ್ಧೀಕರಣ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರ, ಹೊನ್ನಾವರದ ಸ್ನೇಹಕುಂಜ ಮತ್ತು ಕುಮಟಾದ ಕೃಷಿ ಪರಿಸರ ಸಂಸ್ಥೆಗಳ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿ, ಸ್ವಚ್ಛ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮೀನುಗಾರರ ಸಹಕಾರಿ ಸಂಘ ಸೇರಿದಂತೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.
- ಗದಗ: ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದರು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮಾಹಿತಿ ಕೈಪಿಡಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಾಧಕ ಉದ್ಯಮಿಗಳನ್ನು ಸನ್ಮಾನಿಸಲಾಯಿತು. ಬಳಿಕ ಪ್ರಲ್ಹಾದ್ ಜೋಶಿ, ಸ್ಟಾರ್ಟ್ ಅಪ್ ಇಂಡಿಯಾ ಅಡಿಯಲ್ಲಿ 50 ಸಾವಿರಕ್ಕೂ ಅಧಿಕ ಉದ್ದಿಮೆಗಳು ಆರಂಭವಾಗಿದ್ದು, ಕರ್ನಾಟಕ ಮುಂಚೂಣಿಯಲ್ಲಿದೆ. ಮೂಲಸೌಕರ್ಯ ಒದಗಿಸಲು ಅಗತ್ಯ ಬಂಡವಾಳ ಆಕರ್ಷಿಸಲು ವ್ಯವಸ್ಥಿತ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದರು. ಮುರುಗೇಶ್ ನಿರಾಣಿ, ಕೈಗಾರಿಕೋದ್ಯಮದ ಉತ್ತೇಜನಕ್ಕಾಗಿ ಮುಂದಿನ ವರ್ಷ ರಾಜ್ಯ ಸರ್ಕಾರದಿಂದ ಜಾಗತಿಕ ಹೂಡಿಕೆದಾರರ ಸಮ್ಮೇಳನ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್, ಕೈಗಾರಿಕಾ ಕಾರಿಡಾರ್ ಗಳ ಮೂಲಕ ಉದ್ಯಮ ಬೆಳವಣಿಗೆಗೆ ಅಗತ್ಯ ಯೋಜನೆ ರೂಪಿಸಿರುವುದು ಉತ್ತೇಜನಕಾರಿಯಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಮುಖ ಸುದ್ದಿಗಳು :
- ಹವಾಮಾನ: ವಾಯವ್ಯ ಮತ್ತು ಮಧ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಗುಲಾಬ್ ಚಂಡಮಾರುತವು ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯ ನಡುವಿನ ಕಳಿಂಗ ಪಟ್ಟಣದ ಬಳಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
- ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಉಪಕ್ರಮದಲ್ಲಿ, ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ಅಭಿಯಾನ –ಪಿಎಂ ಡಿಎಚ್ಎಂ ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ.
- ಮಿಲಿಟರಿ ಎಂಜಿನಿಯರಿಂಗ್ ಸೇವೆಗಳ – MES 99ನೇ ಸಂಸ್ಥಾಪನಾ ದಿನವಾದ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ MES ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಶುಭ ಕೋರಿದ್ದಾರೆ.
- ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದು ನಕ್ಸಲ್ ಬಾಧಿತ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಉನ್ನತಮಟ್ಟದ ಸಭೆ ನಡೆಸಿದರು. ಬಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ ಗಡಿ ಭಾಗದಲ್ಲಿನ ನಕ್ಸಲ್ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸವಿಸ್ತಾರವಾಗಿ ಚರ್ಚಿಸಿದರು. ನಕ್ಸಲ್ ನಿರ್ಗಹಕ್ಕೆ ಆಯಾ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
- ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಭಾಗವಾಗಿ ಜಮ್ಮು -ಕಾಶ್ಮೀರದ ಶ್ರೀನಗರದ ದಾಲ್ ಕಣಿವೆಯಲ್ಲಿಂದು ಭಾರತೀಯ ವಾಯುಪಡೆಯಿಂದ ವೈಮಾನಿಕ ಪ್ರದರ್ಶನ ನಡೆಯಿತು. ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
