ಕ್ರೀಡೆ: 2021 ರ ಏಷ್ಯನ್ ಟೆಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಪುರುಷರ ತಂಡ 3-1 ಗೋಲುಗಳಿಂದ ಇರಾನ್ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿತು. ಈ ಐತಿಹಾಸಿಕ ಗೆಲುವಿನ ಮೂಲಕ 1976 ರ ನಂತರ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ತನ್ನ 2 ನೇ ಪದಕವನ್ನು ಖಾತರಿಪಡಿಸಿಕೊಂಡಿದೆ.
ರಾಜಕೀಯ: ಮುಖ್ಯಮಂತ್ರಿಯಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರನ್ನು ನೇಮಕ ಮಾಡಲಾಗಿದೆ.
ಸ್ಯಾಂಡಲ್ ವುಡ್: ಇಂದು ಭಾರತೀಯ ಚಿತ್ರರಂಗದ ಅದ್ಭುತ ಪ್ರತಿಭೆ, ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶಂಕರ್‌ನಾಗ್ (9 ನವೆಂಬರ್ 1954- 30 ಸೆಪ್ಟೆಂಬರ್ 1990) ಅವರ ಪುಣ್ಯತಿಥಿ. ಕನ್ನಡ ಚಿತ್ರೋದ್ಯಮಕ್ಕೆ ಕಂಪ್ಯೂಟರ್ ಚಾಲಿತ ಶಬ್ದಗ್ರಹಣ ತಂತ್ರಜ್ಞಾನವನ್ನು ಹೊಂದಿದ್ದ ಸಂಕೇತ್ ಸ್ಟುಡಿಯೋ ಶಂಕರ್‌ನಾಗ್ ಅವರ ಕೊಡುಗೆ. ಶಂಕರ್‌ನಾಗ್ ಉದ್ಘಾಟನಾ IFFI ಅತ್ಯುತ್ತಮ ನಟ ಪ್ರಶಸ್ತಿ, ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಸಿಲ್ವರ್ ಪೀಕಾಕ್ ಪ್ರಶಸ್ತಿ ಹಾಗೂ ಇನ್ನು ಮುಂತಾದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.
ರಾಜ್ಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾಧಕರನ್ನು ಶಿಫಾರಸು ಮಾಡಲು ಸೇವಾ ಸಿಂಧುವಿನಲ್ಲಿ ಅವಕಾಶ ಕಲ್ಪಿಸಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆಗೆ (ಘಟಕ-37 ಕೆಂಗೇರಿ) ಮೊದಲ ವಿದ್ಯುತ್ ಬಸ್ ಅನ್ನು ಸೇರ್ಪಡೆಗೊಳಿಸುವ ಕಾರ್ಯಕ್ರಮವನ್ನು ಸಾರಿಗೆ ಸಚಿವ ಬಿ. ಶ್ರೀರಾಮುಲು ಬೆಂಗಳೂರಿನಲ್ಲಿಂದು ನೆರವೇರಿಸಿದರು.
ದೇಶ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಿನ್ನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ 38ನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಾಲೋಚನೆ ನಡೆಸಿದರು.
ದೆಹಲಿಯಲ್ಲಿ ನಿನ್ನೆ ವಿಜ್ಞಾನ ವಸ್ತು ಸಂಗ್ರಹಾಲಯ ಸ್ಥಾಪನೆ ಸಂಬಂಧ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಹಾಗೂ ವಿಜ್ಞಾನ ವಸ್ತು ಸಂಗ್ರಹಾಲಯಗಳ ರಾಷ್ಟ್ರೀಯ ಮಂಡಳಿ ನಡುವೆ ಏರ್ಪಟ್ಟ ತಿಳವಳಿಕೆ ಪತ್ರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಇಲಾಖೆಯ ಸ್ವತಂತ್ರ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಸಹಿ ಹಾಕಿದರು.
ಭಾರತೀಯ ಸೇನೆಯ ಯುದ್ಧ ಸಾಮರ್ಥ್ಯ ಹೆಚ್ಚಿಸುವ ಸಂಭಂಧ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಎಎಲ್ ಎಚ್ ಮಾರ್ಕ್-3 ಹೆಲಿಕ್ಯಾಪ್ಟರ್ ಒಳಗೊಂಡಂತೆ 13,165 ಕೋಟಿ ರೂಪಾಯಿ ಮೌಲ್ಯದ ಸೇನಾ ಸಲಕರಣೆಗಳ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.
ವಿದೇಶ: ಜಿನೀವಾದ ಅರಿಯಾನಾ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧಿಜೀಯವರ ಪುತ್ಥಳಿಗೆ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವೆ ಮೀನಾಕ್ಷಿ ಲೇಖಿ ಪುಷ್ಪನಮನ ಸಲ್ಲಿಸಿದರು.
ಚೀನಾದಿಂದ ಶ್ರೀಲಂಕಾಕ್ಕೆ ಆಮದಾಗುತ್ತಿದ್ದ ಸಾವಯವ ಗೊಬ್ಬರಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಗಳಿದ್ದು, ಇನ್ನು ಮುಂದೆ ಗೊಬ್ಬರದ ಆಮದನ್ನು ನಿಷೇಧಿಸಲಾಗುವುದು ಎಂದು ಶ್ರೀಲಂಕಾ ರಾಜ್ಯ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
