ಬೆಂಗಳೂರು: ಇಂದು ಪೊಲೀಸ್ ಸಂಸ್ಮರಣಾ ದಿನ. ಇದರ ಅಂಗವಾಗಿ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.
ಬಳಿಕ ಮುಖ್ಯಮಂತ್ರಿ, ಕರ್ನಾಟಕ ಪೊಲೀಸ್ ಇಲಾಖೆಗೆ ದೊಡ್ಡ ಇತಿಹಾಸ ಇದೆ. ಅನೇಕ ಸಂದರ್ಭಗಳಲ್ಲಿ ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಪರಾಧ ಘಟಿಸಿದ ನಂತರ ಅದರ ನಿಯಂತ್ರಣಕ್ಕಾಗಿ ಕಾನೂನು ರೂಪುಗೊಳ್ಳುತ್ತದೆ. ಆದರೆ ಇಂಥ ಅಪರಾಧಗಳ ಸಾಧ್ಯತೆಗಳನ್ನು ಗ್ರಹಿಸಿ ಕಾನೂನನ್ನು ಮುಂಚಿತವಾಗಿಯೇ ರೂಪಿಸುವ ಅಗತ್ಯವಿದೆ ಎಂದರು.
ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರದ ಅಗತ್ಯವಿದ್ದು, ಹಿರಿಯ ಅಧಿಕಾರಿಗಳು ಹೆಚ್ಚು ದಕ್ಷರಾಗಿ ಕಾರ್ಯ ನಿರ್ವಹಿಸಿದರೆ ಕೆಳ ಹಂತದ ಅಧಿಕಾರಿಗಳ ಮೇಲೆ ಪರಿಣಾಮ ಬೀರುತ್ತದೆ. ಪೊಲೀಸರಿಗೆ ಸೌಲಭ್ಯ ನೀಡುವ ವಿಚಾರದಲ್ಲಿ ತಮ್ಮ ಸರ್ಕಾರ ಬೇರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು. ಪೊಲೀಸ್ ನೇಮಕಾತಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪ್ರತಿ ವರ್ಷ ನಾಲ್ಕುರಿಂದ ಐದು ಸಾವಿರ ಪೊಲೀಸರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪೊಲೀಸರ ವಿಶ್ವಾಸಾರ್ಹತೆ ಹೆಚ್ಚಬೇಕಿದೆ. ತರಬೇತಿಯಲ್ಲಿ ಹೊಸ ತಂತ್ರಜ್ಞಾನದ ಪರಿಚಯ, ಸೈಬರ್ ಅಪರಾಧಗಳ ಕುರಿತು ತರಬೇತಿ ನೀಡುವ ಕೆಲಸ ಆಗಬೇಕು ಎಂದರು. ಕಳೆದ ಒಂದು ವರ್ಷದಲ್ಲಿ ಪೊಲೀಸ್ ಠಾಣೆಗಳ ನಿರ್ಮಾಣ ಹೆಚ್ಚಾಗಿದೆ. ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಾಣವಾಗಲಿದೆ.

ಇನ್ಸ್ ಪೆಕ್ಟರ್ ಮತ್ತು ಡಿವೈ ಎಸ್ಪಿ ವರ್ಗಗಳ ಅಧಿಕಾರಿಗಳಿಗೆ ತರಬೇತಿ ಅಗತ್ಯವಿದ್ದು, ಅದಕ್ಕೆ ಪ್ರತ್ಯೇಕ ತರಬೇತಿ ಕಮಾಂಡ್ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಪೊಲೀಸರ ತ್ಯಾಗ, ಬಲಿದಾನ ಹಾಗೂ ಸಾಧನೆಗಳನ್ನು ಜನರಿಗೆ ತಿಳಿಸಲು ಪೊಲೀಸ್ ವಸ್ತುಸಂಗ್ರಹಾಲಯ, ಎಟಿಎಸ್ ಬಲವರ್ಧನೆ, ಜೈಲುಗಳ ಸಂಖ್ಯೆ ಹಾಗೂ ಸಾಮರ್ಥ್ಯ ಹೆಚ್ಚಿಸಲಾಗುವುದಲ್ಲದೆ ಇನ್ನಷ್ಟು ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಇತರರು ಉಪಸ್ಥಿತರಿದ್ದರು.
_ನಮ್ಮನ್ನು ಗೂಗಲ್ ನ್ಯೂಸ್ ಶೆರ್ ಚಾಟ್ ಫೆಸ್ ಬುಕ್ ಪೇಜ್ ಟ್ವೀಟರ್ ಗಳಲ್ಲಿ ಫಾಲೋ-ಸಪೋರ್ಟ್ ಮಾಡಿ