ರಾಜ್ಯಾದ್ಯಂತ ಇಂದಿನಿಂದ SSLC ಪರೀಕ್ಷೆ ಆರಂಭವಾಗಲಿದೆ. ಏಪ್ರಿಲ್ 6ರ ವರೆಗೆ ಪರೀಕ್ಷೆ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುಗಮ ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ರೀತಿಯ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಈ ಮೂಲಕ ಪರೀಕ್ಷಾ ಅವ್ಯವಹಾರಗಳ ಬಗ್ಗೆ ನಿಗಾವಹಿಸಲಾಗಿದೆ.
ರಾಜ್ಯದ ಒಟ್ಟು 2750 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈ ಪೈಕಿ 4,41,910 ಬಾಲಕರು ಹಾಗೂ 4,28,058 ಬಾಲಕಿಯರಿದ್ದಾರೆ.
ಇಂದು ಮೊದಲ ದಿನ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 10.15 ರಿಂದ ಪ್ರಾರಂಭವಾಗಿ ಮಧ್ಯಾಹ್ನ 1.30ಕ್ಕೆ ಮುಗಿಯಲಿದೆ. ಉಳಿದಂತೆ, ಮಾ.27ರಂದು ಸಮಾಜ ವಿಜ್ಞಾನ, ಮಾ.30ರಂದು ವಿಜ್ಞಾನ, ಏಪ್ರಿಲ್ 2ರಂದು ಗಣಿತ, ಏಪ್ರಿಲ್ 4ರಂದು ತೃತೀಯ ಭಾಷೆ ಹಿಂದಿ ಹಾಗೂ ಏ.6ರಂದು ದ್ವಿತೀಯ ಭಾಷೆ ಇಂಗ್ಲೀಷ್ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಧಿಕಾರಿ, ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.