ಅಸ್ಸಾಂ: ನಾಲ್ಕು ದಿನಗಳ ಈಶಾನ್ಯ ಭಾರತ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದು ಕಾಚುಬರಿಯಲ್ಲಿ 61ನೇ ಬೋಡೋ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಪಾಲ್ಗೊಂಡರು.
ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ , ಸಾಹಿತ್ಯ ಮತ್ತು ಭಾಷೆ ಸದಾ ಜನರನ್ನು ಒಗ್ಗೂಡಿಸುತ್ತದೆ. ಜನರ ಹೃದಯವನ್ನು ಬೆಸೆಯುತ್ತದೆ. ಪ್ರತಿ ಭಾಷೆಗೂ ತನ್ನತನ ಇರುತ್ತದೆ ಎಂದು ಹೇಳಿದರು. ಅಸ್ಸಾಂನಲ್ಲಿ 38 ಲಕ್ಷಕ್ಕೂ ಅಧಿಕ ಬೋಡೋ ಮಾತನಾಡುವವರಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮೇಘಾಲಯ, ತ್ರಿಪುರಾ, ಬಾಂಗ್ಲಾ ದೇಶ ಮತ್ತು ನೇಪಾಳದಲ್ಲೂ ಸಹ ಬೋಡೋ ಭಾಷಿಕರಿರುವುದನ್ನು ತಿಳಿದು ಸಂತೋಷವಾಯಿತು ಎಂದು ರಾಷ್ಟ್ರಪತಿ ತಿಳಿಸಿದರು. ಬೋಡೋ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯ ಗೌರವವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿರುವ ಆಯೋಜಕರನ್ನು ಅಭಿನಂದಿಸಿದರು.

ಕೇಂದ್ರ ಸರ್ಕಾರ ಮತ್ತು ಈಶಾನ್ಯ ರಾಜ್ಯಗಳ ಸರ್ಕಾರಗಳ ಪ್ರಯತ್ನದ ಫಲವಾಗಿ ಈ ವಲಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬಲಗೊಳ್ಳುತ್ತಿದೆ. ಈ ಪರಿವರ್ತನೆಯಿಂದ ವಲಯದಲ್ಲಿ ಪ್ರಗತಿಯಾಗುತ್ತಿದೆ . ಈ ಪರಿವರ್ತನೆಗಾಗಿ ಕೇಂದ್ರ, ರಾಜ್ಯ ಹಾಗೂ ಬೋಡೋ ಸೋದರ-ಸೋದರಿಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈಶಾನ್ಯ ರಾಜ್ಯದ ಯಾವುದೇ ಭಾಷಾ ಸಮ್ಮೇಳನದಲ್ಲಿ ಭಾರತದ ರಾಷ್ಟ್ರಪತಿಯವರು ಈವರೆಗೆ ಭಾಗಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ರಾಷ್ಟ್ರಪತಿಯವರು ಬೊಡೋ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದು, ಮಹತ್ವದ್ದಾಗಿದೆ.
ಅಸ್ಸಾಂ ರಾಜ್ಯಪಾಲ ಪ್ರೊ. ಜಗದೀಶ್ ಮುಖಿ, ಮುಖ್ಯಮಂತ್ರಿ ಹಿಮಂತ್ ಬಿಶ್ವಾ ಶರ್ಮ , ಮೇಘಾಲಯ ಮುಖ್ಯಮಂತ್ರಿ ಕಾನ್ ರಾಡ್ ಸಂಗ್ಮಾ, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಮತ್ತಿತರರು ಉಪಸ್ಥಿತರಿದ್ದರು.