- ಅಬಕಾರಿ ನೀತಿಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ
- ಸಚಿವ ಅನುರಾಗ್ ಸಿಂಗ್ ಠಾಕೂರ್, ಆಪ್ ಸರ್ಕಾರ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಆಕ್ರೋಶ
- ನೂತನ ಅಬಕಾರಿ ನೀತಿ ಭ್ರಷ್ಟಾಚಾರಕ್ಕೆ ಅನುವು – ಆದೇಶ್ ಗುಪ್ತಾ
- 8 ಗಂಟೆಗೂ ಹೆಚ್ಚು ಸಮಯ ದಾಳಿ
- ಎಫ್‌ಐಆರ್‌ನಲ್ಲಿ ಸಿಸೋಡಿಯಾ ಸೇರಿದಂತೆ 15 ಮಂದಿಯ ಹೆಸರು ದಾಖಲು
ಅಬಕಾರಿ ನೀತಿಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೀಶ್ ಸಿಸೋಡಿಯಾ ಅವರಲ್ಲದೆ, ನಾಲ್ವರು ಅಧಿಕಾರಿಗಳ ಮನೆ ಸೇರಿ ಸುಮಾರು 21 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮಗಳು ನಡೆದಿದೆ ಎಂಬ ಕಾರಣಕ್ಕೆ ಉಪರಾಜ್ಯಪಾಲ ವಿನಯ್ ಸಕ್ಸೇನಾ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದಾರೆ. ಅದರಂತೆ ಸಿಬಿಐ ತನಿಖೆ ಆರಂಭಿಸಿದೆ.

ಸಿಬಿಐ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್, ಆಪ್ ಸರ್ಕಾರ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಇದು ಆಪ್ ಸರ್ಕಾರದ ಮೊದಲ ಭ್ರಷ್ಟಾಚಾರ ಪ್ರಕರಣವಲ್ಲ. ಇಂದು ಅಬಕಾರಿಗೆ ಸಂಬಂಧಿಸಿದ ಭ್ರಷ್ಟಾಚಾರ ಜನತೆಯ ಎದುರು ಬಹಿರಂಗವಾಗಿದೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷದ ದೆಹಲಿ ವಿಭಾಗದ ಅಧ್ಯಕ್ಷ ಆದೇಶ್ ಗುಪ್ತಾ, ಆಪ್ ಸರ್ಕಾರದ ನೂತನ ಅಬಕಾರಿ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದರು. ಕೇಂದ್ರದ ಮಾಜಿ ಸಚಿವ ಡಾ.ಹರ್ಷವರ್ಧನ್, ದೆಹಲಿಯಲ್ಲಿ ಮನೆ-ಮನೆಗೆ ನೀರು ತಲುಪುತ್ತಿಲ್ಲ. ಆದರೆ, ಮದ್ಯದ ಸರಬರಾಜು ನಡೆದಿದೆ. ನೂತನ ಅಬಕಾರಿ ನೀತಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.
ಅಬಕಾರಿ ನೀತಿ ಪ್ರಕರಣದಲ್ಲಿ ಅವರ ನಿವಾಸದ ಮೇಲೆ ಸಿಬಿಐ ಕಳೆದ 8 ಗಂಟೆಗೂ ಹೆಚ್ಚು ಸಮಯ ದಾಳಿ ಕಾರ್ಯ ನಡೆಸುತ್ತಿದೆ.
ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 15 ಮಂದಿಯ ಹೆಸರು ದಾಖಲಾಗಿದೆ. ಅಬಕಾರಿ ಅಧಿಕಾರಿಗಳು, ಮದ್ಯದ ಕಂಪನಿ ಅಧಿಕಾರಿಗಳು, ವಿತರಕರು ಮತ್ತು ಅಪರಿಚಿತ ಸಾರ್ವಜನಿಕ ಸೇವಕರು ಮತ್ತು ಖಾಸಗಿ ವ್ಯಕ್ತಿಗಳ ಮೇಲೂ ಪ್ರಕರಣ ದಾಖಲಿಸಲಾಗಿದೆ.
–Follow us on DailyHunt