ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು, ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ನಂತರ ಮುಖ್ಯಮಂತ್ರಿಗಳು, “ಸಮಾಜದ ಸುರಕ್ಷತೆ, ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು. ಜನರು ಅವರ ಕರ್ತವ್ಯವನ್ನು ಗೌರವಿಸಿ ಕಾನೂನು ಸುವ್ಯವಸ್ಥೆ ಪಾಲನೆಗೆ ಸಹಕರಿಸಬೇಕು ಎಂದರು. ಸರ್ಕಾರ ಪೊಲೀಸರಿಗೆ ಎಲ್ಲಾ ಅಗತ್ಯ ಸಹಕಾರವನ್ನು ನೀಡಲಿದೆ. ಇಲಾಖೆಯ ಎಲ್ಲ ಹಂತಗಳಲ್ಲಿ ಬಾಕಿ ಇರುವ ಬಡ್ತಿ ಸಮಸ್ಯೆಯನ್ನು ನಿವಾರಿಸಲಾಗಿದೆ” ಎಂದರು. “ಹೆಣ್ಣು ಮಕ್ಕಳ ಸುರಕ್ಷತೆಗೆ ಸರ್ಕಾರ ವಿಶೇಷ ಯೋಜನೆ ರೂಪಿಸಿದ್ದು, ಪ್ರತಿ ಕಾಲೇಜಿನಲ್ಲಿ ಮಹಿಳಾ ರಕ್ಷಣಾ ವಿಭಾಗ ಆರಂಭಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳು ಅದರ ಭಾಗವಾಗಲಿದ್ದಾರೆ. ಈ ಅಧಿಕಾರಿಗಳು ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಯ ತರಬೇತಿ ನೀಡಲಿದ್ದಾರೆ ಎಂದು ಹೇಳಿದರು. ಪೊಲೀಸರಿಗೆ ಅಗತ್ಯ ಸೌಲಭ್ಯಗಳ ಜೊತೆಗೆ ಕಾನೂನು ಬಲ ಹಾಗೂ ವೈಜ್ಞಾನಿಕ ಬೆಂಬಲ ಒದಗಿಸುವ ಅಗತ್ಯವಿದೆ. ಇಂದು ಆನ್ ಲೈನ್ ಗೇಮಿಂಗ್ ಜಾಲಕ್ಕೆ ಸಿಲುಕಿ ಹಲವರು ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದನ್ನು ತಡೆಯಲು ಬಿಗಿಯಾದ ಕಾನೂನು ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಬಡ ಕುಟುಂಬಗಳ ಸ್ವಾಸ್ಥ್ಯ ಹಾಗೂ ಮನಃಶಾಂತಿಯನ್ನು ಕಾಪಾಡಲು ಸಹಕಾರಿಯಾಗಲಿದೆ” ಎಂದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಾನೂನು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಉಪಸ್ಥಿತರಿದ್ದರು.
