ಹಾವೇರಿ: ಮೂರು ದಿನಗಳ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ವಿಧ್ಯುಕ್ತ ಚಾಲನೆ ದೊರೆಯಿತು.
ಹಾವೇರಿ ಜಿಲ್ಲಾ ಉಸ್ತವಾರಿ ಸಚಿವ ಅರೆಬೈಲು ಶಿವರಾಮ ಹೆಬ್ಬಾರ್ ರಾಷ್ಟ್ರ ಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಸಾಹಿತ್ಯ ಪರಿಷತ್ತಿನ ಧ್ವಜ , ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಬಿ ಹಿರೇಮಠ ನಾಡ ಧ್ವಜಾರೋಹಣ ನೆರವೇರಿಸಿದರು.
ಸಂಸದ ಶಿವಕುಮಾರ್ ಉದಾಸಿ, ಶಾಸಕ ನೆಹರು ಓಲೆಕಾರ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿ.ಪಂ. ಸಿಇಓ ಮಹಮದ್ ರೋಷನ್, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸೇರಿದಂತೆ ಮತ್ತಿತರು ಇದ್ದರು.
ನಂತರ ಸಚಿವ ಅರೆಬೈಲು ಶಿವರಾಮ ಹೆಬ್ಬಾರ್ “ಹಾವೇರಿ ಸಾಹಿತ್ಯ ಸಮ್ಮೇಳನವನ್ನು ಕನ್ನಡಿಗರು ಹಾಗೂ ಸಾಹಿತ್ಯಾಸಕ್ತರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಆಯೋಜಿಸಲಾಗಿದೆ” ಎಂದು ಹೇಳಿದರು.
“ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಹಾವೇರಿಗೆ ಆಗಮಿಸಿದ ಸಮ್ಮೇಳಾನಧ್ಯಕ್ಷರನ್ನು ಜಿಲ್ಲಾಡಳಿತದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಗಿದೆ. ಸಮ್ಮೇಳನದ ಕಾರ್ಯಗಳು ಸುಗಮವಾಗಿ ಜರುಗಲಿ ಎಂಬ ಉದ್ದೇಶದಿಂದ, ನಿಗದಿತ ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನಡೆಸಲಾಗಿದೆ. ಸಮ್ಮೇಳನದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಉತ್ತಮ ಚರ್ಚೆ ನೆಡೆಯಲಿವೆ. ಸಮ್ಮೇಳನಕ್ಕೆ ಯಾವುದೇ ಕೊರತೆಯಾಗದಂತೆ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಸಾಕಷ್ಟು ಎಚ್ಚರಿಕೆ ವಹಿಸಿ, ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವ ಘೋಷಣೆಯನ್ನು ಅರ್ಥಗರ್ಭಿತವಾಗಿ ಜಾರಿಗೆ ತರಲು ಸರ್ಕಾರ ಪ್ರಯತ್ನ ಮಾಡುತ್ತಿದೆ” ಎಂದರು.

ಧ್ವಜಾರೋಹಣದ ನಂತರ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.
_ನಮ್ಮನ್ನು ಡೇಲಿಹಂಟ್ ನಲ್ಲಿ ಫಾಲೋ-ಸಪೋರ್ಟ್ ಮಾಡಲು ಕ್ಲಿಕ್ಕಿಸಿ