- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಾಡಿದ್ದು ಸಂಜೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಹಲವು ದಶಕಗಳಿಂದ ಖಾದಿ ಉತ್ಪನ್ನ ಮತ್ತು ಮಾರಾಟ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಧಾರವಾಡದ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಗುವುದು.
- ಬೆಟ್ಟಿಂಗ್, ಕ್ಯಾಸಿನೊ, ಜೂಜು, ಕುದುರೆ ರೇಸು, ಆನ್‌ಲೈನ್ ಮನಿ ಗೇಮ್‌ಗಳನ್ನು ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಲು ಕರ್ನಾಟಕ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.
- ಗುಂಪು ಹತ್ಯೆ, ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ ಹಾಗೂ ಅವರ ಅವಲಂಬಿತ ಕುಟುಂಬ ವರ್ಗಕ್ಕೆ ನೀಡುವ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಿಸಿ, ಆದೇಶ ಹೊರಡಿಸಿದೆ. ಸಂತ್ರಸ್ತರಿಗೆ 10 ಲಕ್ಷ, ಶೇ. 80ರಷ್ಟು ದಿವ್ಯಾಂಗರಾದರೆ 5 ಲಕ್ಷ, ಶೇಕಡ ೪೦ರಷ್ಟು ದಿವ್ಯಾಂಗರಾದರೆ 4 ಲಕ್ಷ ಪರಿಹಾರವನ್ನು ನೀಡಲಾಗುವುದು.
- ಕಳೆದ ಮೇ ತಿಂಗಳಲ್ಲಿ ಆರ್‌ಬಿಐ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದುಕೊಂಡಿತ್ತು. ಆ ಬಳಿಕ ಅವುಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸಲು ನೀಡಿದ್ದ ಮೂರು ತಿಂಗಳ ಗಡುವು ಇಂದು ಮುಕ್ತಾಯಗೊಳ್ಳಲಿದೆ.

- ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿಗಳು ನಾಳೆಯಿಂದ ಜಾರಿಯಾಗುತ್ತಿದ್ದು, ಹಳೆಯ ದರಗಳಲ್ಲಿ ನಡೆಯುತ್ತಿದ್ದ ನೋಂದಣಿ ಪ್ರಕ್ರಿಯೆ ಇಂದು ಮಧ್ಯಾಹ್ನ ಕೊನೆಗೊಳ್ಳಲಿದೆ. ಮಧ್ಯಾಹ್ನದ ನಂತರ 17 ಗಂಟೆಗಳ ಕಾಲ ಪೋರ್ಟಲ್ ಸ್ಥಗಿತಗೊಳ್ಳಲಿದ್ದು, ಪರಿಷ್ಕೃತ ದರದಂತೆ ಅಕ್ಟೋಬರ್ 2 ರಿಂದ ನೋಂದಣಿ ಕಾರ್ಯ ಆರಂಭವಾಗಲಿದೆ.
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿಂದು ಸಂಜೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರೊಂದಿಗೆ ಸಭೆ ನಡೆಯಲಿದೆ. ಸಭೆಯಲ್ಲಿ ಈ ಮೂರು ಇಲಾಖೆಗಳಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಮಾಡಲಾಗುವುದು.
- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-ಪೋಸ್ಕೊ ಅಡಿ ಹಾಲಿ ಇರುವ ಮಕ್ಕಳ ವಯಸ್ಸಿನ ಮಿತಿಯನ್ನು ಹಾಗೆಯೇ ಉಳಿಸಿಕೊಳ್ಳಲು 22ನೇ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಬಾಲ್ಯವಿವಾಹ ಮತ್ತು ಮಕ್ಕಳ ಕಳ್ಳಸಾಗಣೆ ವಿರುದ್ಧ ಹೋರಾಡಲು & ಅವುಗಳ ಪರಿಣಾಮಗಳನ್ನು ತಡೆಯಲು ಇದು ಅಗತ್ಯ ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
- ಇತ್ತೀಚೆಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಎರಡೂ ಸದನಗಳು ಅನುಮೋದಿಸಿದ್ದ ಮಹಿಳಾ ಮೀಸಲು ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ನಾರಿಶಕ್ತಿ ವಂದನಾ ಅಧಿನಿಯಮ ಎಂದು ಕರೆಯುವ ಈ ಕಾನೂನಿಗೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ರಾಷ್ಟ್ರಪತಿಗಳ ಅಂಕಿತ ದೊರೆತಿರುವ ಹಿನ್ನೆಲೆಯಲ್ಲಿ ಇದೀಗ ಮಸೂದೆ ಶಾಸನವಾಗಿದೆ. ಈ ಕಾನೂನಿನನ್ವಯ ದೆಹಲಿ ವಿಧಾನಸಭೆ ಸೇರಿದಂತೆ ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗುವುದು.