ಕರ್ನಾಟಕ ವಿಧಾನ ಸಭೆ: 13 ನೇ ಅಧಿವೇಶನ, 9 ನೇ ದಿನ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಿ, ಇಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ವಿಧಾನಸಭೆಗಿಂದು ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಲಿಂಗೇಶ್ ಕೆ.ಎಸ್. ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ರಾಜ್ಯದಲ್ಲಿ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿದ್ದು, 3 ಸಾವಿರದ 670 ಸೀಟುಗಳು ಲಭ್ಯವಿದೆ. ಆದರೆ ಭರ್ತಿಯಾಗುತ್ತಿರುವುದು 2 ಸಾವಿರದ 086 ಸೀಟುಗಳು ಮಾತ್ರ ಹೀಗಾಗಿ ಸರ್ಕಾರಿ ಕಾಲೇಜುಗಳನ್ನು ಬಲವರ್ಧನೆ ಮಾಡುವ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲು ಒತ್ತು ನೀಡಲಾಗುವುದು ಜೊತೆಗೆ ಖಾಸಗಿ ಕಂಪನಿಗಳೊಂದಿಗೆ ಸರ್ಕಾರಿ ಕಾಲೇಜುಗಳ ಸಹಭಾಗಿತ್ವಕ್ಕೂ ಒತ್ತು ನೀಡಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಒಂದು ಆಸ್ಪತ್ರೆಗೆ ಅನುದಾನ ದೊರೆಯಲು ಅವಕಾಶವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು. ಸಿ.ಎನ್. ಬಾಲಕೃಷ್ಣ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ತಾಯಿ ಮಗು ಆಸ್ಪತ್ರೆ ನಿರ್ಮಾಣ ಮಾಡಲು ಕೇಂದ್ರದ ಅನುದಾನ ಮಾತ್ರ ದೊರೆಯುತ್ತದೆ. ರಾಜ್ಯ ವಲಯದಲ್ಲಿ ಅನುದಾನ ದೊರೆಯುವುದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ್ದು, ಶೇಕಡಾ 70ರಷ್ಟು ಹಾಸಿಗೆ ಹೆರಿಗೆ ಉದ್ದೇಶಕ್ಕೆ ಮೀಸಲಿಡಬೇಕಾಗುತ್ತದೆ. ಈ ಬೇಡಿಕೆ ಕಾನೂನಿನಡಿ ಜಾರಿಗೊಳಿಸಲು ಸಾಧ್ಯವಾದರೆ ಪರಿಶೀಲಿಸುವುದಾಗಿ ತಿಳಿಸಿದರು.

ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದುಗಲ್ ಕೋಟೆ ಅಭಿವೃದ್ಧಿ ಕುರಿತು ಪ್ರವಾಸೋದ್ಯಮ ಇಲಾಖೆ ಆಯುಕ್ತರು ವರದಿ ಸಲ್ಲಿಸಲಿದ್ದು, ನಂತರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಡಿ.ಎಸ್ ಹುಲಗೇರಿ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಉತ್ತರಿಸಿದರು. ಜಲದುರ್ಗಕ್ಕೆ 1 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಮೊದಲ ಆದ್ಯತೆಯಲ್ಲಿ ಮುದಗಲ್ ಕೋಟೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಭೂಸನೂರು ರಮೇಶ್ ಬಾಳಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಇಂಧನ ಸಚಿವ ವಿ. ಸುನೀಲ್ ಕುಮಾರ್, ಇಂಧನ ಇಲಾಖೆಯಲ್ಲಿ I T I ಅಧ್ಯಯನ ಮಾಡಿದ 9,200 ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
(with DD Chandana inputs )