ನವದೆಹಲಿ: ವಿಶ್ವ ಸೈಕಲ್ ದಿನ ಮತ್ತು ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ಐತಿಹಾಸಿಕ ಸ್ಥಳಗಳಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ , ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಚಾಲನೆ ನೀಡಿದರು.

ಕೇಂದ್ರ ಸಚಿವ ಮನ್ಸೂಖ್ ಮಾಂಡವೀಯ ಹಾಗೂ ನೂರಾರು ಸಂಖ್ಯೆಯಲ್ಲಿ ಯುವಕರು ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರಾದ್ಯಂತ 75 ಐತಿಹಾಸಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸೈಕಲ್ ಜಾಥಾ ನಡೆಯುತ್ತಿದೆ. ನಂತರ ವಾಹಿನಿಯೊಂದಕ್ಕೆ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ , ಸೈಕಲ್ ಮೂಲಕ ಮನೆ ಮನೆಗೆ ತೆರಳಿ, ದೇಶಭಕ್ತಿಯ ಜಾಗೃತಿ ಮೂಡಿಸುವ ಕೆಲಸವಾಗಿತ್ತು ಎಂದು ಹೇಳಿದರು. ದೇಶದ ಯುವಕರು ಮತ್ತು ಜನರನ್ನು ಫಿಟ್ ಇಂಡಿಯಾ ಜತೆ ಜೋಡಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾಗಿದೆ. ಈ ನಿಟ್ಟಿನಲ್ಲಿ , ಸೈಕಲ್ ಬಳಕೆ ಕುರಿತು ಜಾಗೃತಿ ಮೂಡಿಸುವುದು ಜಾಥಾದ ಉದ್ದೇಶವಾಗಿದೆ ಎಂದರು. ಸೈಕಲ್ ಬಳಕೆಯಿಂದ ದೈಹಿಕವಾಗಿ ನಾವು ಆರೋಗ್ಯವಂತರಾಗುವುದರ ಜತೆಗೆ , ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ. ಆರೋಗ್ಯವಂತ ಭಾರತ, ಸ್ವಚ್ಛ ಭಾರತ, ಫಿಟ್ ಇಂಡಿಯಾ ನಿರ್ಮಾಣಕ್ಕೆ ಸೈಕಲ್ ಸಹಕಾರಿಯಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಪರಿಸರಕ್ಕಾಗಿ ಜೀವನಶೈಲಿ ಎಂದು ಮಹಾತ್ಮಾ ಗಾಂಧಿಯವರ ಫೋಟೋ ಜೊತೆ ಟ್ವೀಟ್ ಮಾಡಿದ್ದು, ಇಂದು ವಿಶ್ವ ಬೈಸಿಕಲ್ ದಿನ. ಸುಸ್ಥಿರ ಮತ್ತು ಆರೋಗ್ಯಕರ ಜೀವನಶೈಲಿಗಾಗಿ ಸ್ಫೂರ್ತಿ ಪಡೆಯಲು ಮಹಾತ್ಮ ಗಾಂಧಿಯವರಿಗಿಂತ ಉತ್ತಮರು ಯಾರೂ ಇಲ್ಲ ಎಂದು ಹೇಳಿದ್ದಾರೆ.