ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮೇ 10ಕ್ಕೆ ಮತದಾನ ಮತ್ತು ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ನಿನ್ನೆಯಿಂದಲೇ ನೀತಿ ಸಂಹಿತೆಯು ಜಾರಿಯಾಗಿದೆ.
ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ , ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಹಣಬಲ ತಡೆಗಟ್ಟುವುದು ಹಾಗೂ ನಗರ ಪ್ರದೇಶದ ಮತದಾರರನ್ನು ಮತಗಟ್ಟೆಯತ್ತ ತರುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ. ಮೊದಲ ಬಾರಿಗೆ ಮತದಾನ ಮಾಡುತ್ತಿರುವವರನ್ನು ಪ್ರೋತ್ಸಾಹಿಸಲಾಗುವುದು.
2018ರ ಚುನಾವಣೆಯಲ್ಲಿ ಹಿಂದಿನ ಚುನಾವಣೆಗೂ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದ್ದು, ಈ ಬಾರಿ ಹೆಚ್ಚಿನ ಪ್ರಮಾಣದ ಮತದಾನಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದರು. ರಾಜ್ಯದಲ್ಲಿನ 58 ಸಾವಿರದ 282 ಮತಗಟ್ಟೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಇವಿಎಂ ಯಂತ್ರಗಳು ಲಭ್ಯ ಇವೆ. 1 ಲಕ್ಷದ 15 ಸಾವಿರದ 709 ಬ್ಯಾಲೆಟ್ ಯೂನಿಟ್ ಇದ್ದು, 82ಸಾವಿರದ 543 ಕಂಟ್ರೋಲ್ ಯೂನಿಟ್ ಮತ್ತು 89 ಸಾವಿರದ 379 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಹೈದಾರಾಬಾದ್‌ನಿಂದ ಇವಿಎಂಗಳನ್ನು ತರಿಸಲಾಗಿದ್ದು, ರಾಜ್ಯದ ಚುನಾವಣೆಯಲ್ಲಿ ಅವುಗಳನ್ನು ಬಳಕೆ ಮಾಡಲಾಗುತ್ತಿದೆ ಚುನಾವಣೆ ವೇಳೆ ಅಕ್ರಮ ತಡೆಯಲು ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ರಾಜ್ಯದಲ್ಲಿ ಒಟ್ಟು 942 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 171 ಚೆಕ್‌ಪೋಸ್ಟ್‌ಗಳು ಅಂತಾರಾಜ್ಯ ಗಡಿ ಚೆಕ್‌ಪೋಸ್ಟ್‌ಗಳಾಗಿವೆ.

ವಿಧಾನಸಭೆ ಚುನಾವಣೆಗೆ 2ಸಾವಿರದ 40 ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, 2 ಸಾವಿರದ 605 ಸ್ಥಿರ ಕಣ್ಗಾವಲು, 266 ವಿಡಿಯೋ ವೀಕ್ಷಣೆ ತಂಡಗಳು, 631 ವಿಡಿಯೋ ಕಣ್ಗಾವಲು ತಂಡ ಮತ್ತು 225 ಲೆಕ್ಕಪರಿಶೋಧಕ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆಯೋಗವು ವೆಚ್ಚದ ಮಿತಿಯನ್ನು ನಿಗದಿಗೊಳಿಸಿದ್ದು, ಪ್ರತಿ ಅಭ್ಯರ್ಥಿಗಳು 40 ಲಕ್ಷ ರೂಪಾಯಿವರೆಗೆ ಚುನಾವಣಾ ವೆಚ್ಚವನ್ನು ನಿಗದಿಗೊಳಿಸಿದೆ. ಅಭ್ಯರ್ಥಿಗಳು ವೆಚ್ಚ ಮಾಡುವ ಮೊತ್ತದ ಮೇಲೆ ನಿಗಾವಹಿಸಲು 234 ಸಹಾಯಕ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ. ರಾಜ್ಯದ 58 ಸಾವಿರದ 282 ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತಗಟ್ಟೆಗಳಲ್ಲಿ ಶಾಶ್ವತವಾಗಿ ಮೂಲಸೌಕರ್ಯ ಕಲ್ಪಿಸಿರುವ ರಾಜ್ಯಗಳ ಪೈಕಿ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿವೆ.
ಚುನಾವಣೆ ಸಮಯದಲ್ಲಿ ಮಾತ್ರ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಆದರೆ, ಇದೇ ಮೊದಲ ಬಾರಿಗೆ ಮತಗಟ್ಟೆಗಳಲ್ಲಿ ಶಾಶ್ವತ ಮೂಲಸೌಕರ್ಯ ಕಲ್ಪಿಸಲಾಗಿದೆ. ರಾಂಪ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
_Follow us on twitter
_ Follow us on Google News
_ Follow us on Koo App
_ Follow us on Facebook Page
_ Follow us on Share Chat