ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು 2023-24ನೇ ಸಾಲಿನ ರಾಜ್ಯ ಮುಂಗಡ ಪತ್ರ ಮಂಡಿಸಿದರು. ಇದು ಹಣಕಾಸು ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಅವರ 2ನೇ ಆಯವ್ಯಯವಾಗಿದೆ.
ಮುಂದಿನ 25 ವರ್ಷಗಳ ಅಮೃತ ಕಾಲದ ದೂರದೃಷ್ಟಿಯ ಈ ಬಜೆಟ್ ನಲ್ಲಿ ಕೃಷಿ, ರೈತ ಕಲ್ಯಾಣ, ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ನೀರಾವರಿ , ಶಿಕ್ಷಣ ಸೇರಿದಂತೆ ಎಲ್ಲಾ ವರ್ಗಗಳಿಗೆ ಮತ್ತು ವಲಯಗಳಿಗೆ ಒತ್ತು ನೀಡಲಾಗಿದೆ. ಹಲವು ಹೊಸ ಕಾರ್ಯಕ್ರಮಗಳೊಂದಿಗೆ ಹಳೆಯ ಕಾರ್ಯಕ್ರಮಗಳಿಗೂ ನೂತನ ಸ್ಪರ್ಶ ನೀಡುವ ಆರ್ಥಿಕ ಬೆಳವಣಿಗೆ ಮತ್ತು ವಿತ್ತೀಯ ಶಿಸ್ತಿಗೆ ಒತ್ತು ಕೊಡುವ ಒಟ್ಟಾರೆ 3 ಲಕ್ಷದ 9 ಸಾವಿರದ 182 ಕೋಟಿ ರೂಪಾಯಿ ಮೊತ್ತದ ಆಯವ್ಯಯವನ್ನು ಮುಖ್ಯಮಂತ್ರಿ ಮಂಡಿಸಿದರು. ಇದರಲ್ಲಿ 2 ಲಕ್ಷದ 25 ಸಾವಿರದ 507 ಕೋಟಿ ರೂಪಾಯಿ ರಾಜಸ್ವ ವೆಚ್ಚ, 61 ಸಾವಿರದ 234 ಕೋಟಿ ರೂಪಾಯಿ ಬಂಡವಾಳ ವೆಚ್ಚ ಹಾಗೂ 22 ಸಾವಿರದ 441 ಕೋಟಿ ರೂಪಾಯಿ ಸಾಲದ ಮರುಪಾವತಿ ವೆಚ್ಚವನ್ನು ಈ ಬಜೆಟ್ ಒಳಗೊಂಡಿದೆ. ರಾಜ್ಯದ ಸ್ವಂತ ತೆರಿಗೆ ರಾಜಸ್ವ 1 ಲಕ್ಷ 64 ಸಾವಿರದ 653 ಕೋಟಿ ರೂಪಾಯಿ ಎಂದು ನಿಗದಿ ಮಾಡಿದ್ದು, ತೆರಿಗೆಯೇತರ ರಾಜಸ್ವದಿಂದ 11 ಸಾವಿರ ಕೋಟಿ ರೂಪಾಯಿ, ಕೇಂದ್ರೀಯ ತೆರಿಗೆ ರೂಪಾಯಿದಲ್ಲಿ 32 ಸಾವಿರದ 552 ಕೋಟಿ ರೂಪಾಯಿ ಹಾಗೂ ಕೇಂದ್ರ ಸರ್ಕಾರದಿಂದ 13 ಸಾವಿರದ 5 ಕೋಟಿ ರೂಪಾಯಿ ಸಹಾಯಧನವನ್ನು ರಾಜ್ಯ ಸರ್ಕಾರ ನಿರೀಕ್ಷೆ ಮಾಡಿದೆ.
ವಿತ್ತೀಯ ಕೊರತೆ 60 ಸಾವಿರದ 581 ಕೋಟಿ ರೂಪಾಯಿ ಎಂದು ಅಂದಾಜಿಸಿದ್ದು, ಇದು ಜಿ ಎಸ್ ಡಿ ಪಿಯ ಶೇಕಡ 2.60ರಷ್ಟಾಗಿದೆ ಎಂದು ಹೇಳಿದ ಮುಖ್ಯಮಂತ್ರಿ, ಈ ವರ್ಷದ ಜುಲೈ ವರೆಗೆ ಲೇಖಾನುದಾನಕ್ಕೆ ಅನುಮತಿ ನೀಡುವಂತೆ ಸದನದಲ್ಲಿ ಕೋರಿದರು. ವೃತ್ತಿ ತೆರಿಗೆ ಅಧಿನಿಯಮವನ್ನು ತಿದ್ದುಪಡಿ ಮಾಡಿ ಸರಳೀಕರಣಗೊಳಿಸಲು ಉದ್ದೇಶಿಸಿದ್ದು, ಕಡಿಮೆ ವರಮಾನದ ವರ್ಗಕ್ಕೆ ಪರಿಹಾರ ನೀಡಲು ಸಂಬಳ ಅಥವಾ ಮಜೂರಿ ಪಡೆಯುವ ನೌಕರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು 15 ಸಾವಿರದಿಂದ 25 ಸಾವಿರ ರೂಪಾಯಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಜಿಎಸ್ ಟಿ ಪೂರ್ವ ತೆರಿಗೆ ವಿವಾದಗಳನ್ನು ಯಾವುದೇ ದಾವೆ ಇಲ್ಲದೇ ಇತ್ಯರ್ಥಗೊಳಿಸಲು ಕರ ಸಮಾಧಾನ ಯೋಜನೆಯಡಿ ಅವಕಾಶ ಕಲ್ಪಿಸಿದ್ದು, ಈ ವರ್ಷದ ಅಕ್ಟೋಬರ್ 30ರೊಳಗೆ ತೆರಿಗೆ ಪಾವತಿಸುವವರಿಗೆ ಬಡ್ಡಿ ಮತ್ತು ದಂಡ ಬಡ್ಡಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.
ಜಿಎಸ್ ಟಿ ಸಂಗ್ರಹಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಉತ್ತಮ ಬೆಳವಣಿಗೆ ಸಾಧಿಸಿದೆ. 2022-23ನೇ ಸಾಲಿನ ವಾಣಿಜ್ಯ ತೆರಿಗೆ ಇಲಾಖೆಗೆ ಆಯವ್ಯಯದಲ್ಲಿ ಜಿಎಸ್ ಟಿ ಪರಿಹಾರ ಹೊರತುಪಡಿಸಿ 72 ಸಾವಿರದ 10 ಕೋಟಿ ರೂಪಾಯಿ ಗುರಿ ನೀಡಲಾಗಿದ್ದು, ವರ್ಷಾಂತ್ಯಕ್ಕೆ 83 ಸಾವಿರದ 10 ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆಯಾಗುವ ವಿಶ್ವಾಸವಿದೆ ಎಂದರು. ನೋಂದಣಿ ಮತ್ತು ಮುದ್ರಾಂಕ ವಲಯದಲ್ಲಿ ಮುಂದಿನ ವರ್ಷ 19 ಸಾವಿರ ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆ ಗುರಿ ನಿಗದಿ ಮಾಡಿದ್ದು, ಅಬಕಾರಿ ವಲಯದಲ್ಲಿ 29 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿಯಿದೆ. ಮಾರ್ಚ್ ಅಂತ್ಯದ ವೇಳೆಗೆ ಗುರಿ ಮೀರಿ 32 ಸಾವಿರ ಕೋಟಿ ರೂಪಾಯಿ ಸಂಗ್ರಹಣೆ ಮಾಡುವ ವಿಶ್ವಾಸವಿದ್ದು, ಇದು ಆಯವ್ಯಯ ಅಂದಾಜಿಗಿಂತ ಶೇಕಡ 10ರಷ್ಟು ಹೆಚ್ಚಾಗಿದೆ.
ಬರುವ ವರ್ಷ ಈ ವಲಯದಲ್ಲಿ 35 ಸಾವಿರ ಕೋಟಿ ರೂಪಾಯಿ ಗುರಿ ನಿಗದಿ ಪಡಿಸಲಾಗಿದೆ. ಸಾರಿಗೆ ವಲಯದಲ್ಲಿ ಶೇಕಡ 13ರಷ್ಟು ಸಂಪನ್ಮೂಲ ಹೆಚ್ಚಾಗಿದ್ದು, ಬರುವ ವರ್ಷ 10 ಸಾವಿರದ 500 ಕೋಟಿ ರೂಪಾಯಿ ಹಾಗೂ ಗಣಿ ಮತ್ತು ಭೂವಿಜ್ಞಾನ ವಲಯದಲ್ಲಿ 7 ಸಾವಿರದ 500 ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಹೂಡಿಕೆದಾರರ ಸ್ನೇಹಿ ವಾತಾವರಣದ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು, ಸುಗಮ ವ್ಯವಹಾರ ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆರ್ ಬಿಐ ನ ಸೂಕ್ತ ಮಾರ್ಗದರ್ಶನ ಹಾಗೂ ರಾಜ್ಯ ಸರ್ಕಾರದ ರಚನಾತ್ಮಕ ಕ್ರಮಗಳಿಂದ ಹಣದುಬ್ಬರ ನಿಯಂತ್ರಣಕ್ಕೆ ತರಲಾಗಿದೆ. ಕೈಗಾರಿಕಾ ವಲಯದಲ್ಲಿ ಶೇಕಡ 5.1 ಹಾಗೂ ಕೃಷಿ ವಲಯ ಶೇಕಡ 5.5ರಷ್ಟು ಪ್ರಗತಿ ಸಾಧಿಸಿದ್ದು, ರಾಜ್ಯದ ಹಣಕಾಸು ಪರಿಸ್ಥಿತಿ ಸದೃಢವಾಗಿದೆ. ರಾಜಸ್ವ ಸಂಗ್ರಹ ವೃದ್ಧಿಯಾಗಿದ್ದು, ಸ್ವಂತ ತೆರಿಗೆ ಸಂಗ್ರಹ ಶೇಕಡ 22ರಷ್ಟು ಹೆಚ್ಚಳವಾಗಿದೆ ಎಂದರು. ಕೋವಿಡ್ ನಂತರ ಭಾರತ ಪುಟಿದೆದ್ದಿದ್ದು ಕರ್ನಾಟಕದ ಪ್ರಗತಿ ಆಶಾದಾಯಕವಾಗಿದೆ. ಭಾರತ ಜಿ-20 ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ 14 ಮಹತ್ವದ ಸಭೆಗಳು ನಡೆಯುತ್ತಿವೆ ಎಂದು ಹೇಳಿದ ಬಸವರಾಜ ಬೊಮ್ಮಾಯಿ , ‘ ಹೋಗುತ್ತಿದೆ ಹಳೆಯ ಕಾಲ, ಹೊಸ ಕಾಲ ಬರುತಲಿದೆ, ಬರುತಲಿದೆ ಹೊಸ ದೃಷ್ಟಿ, ಹೊಸ ಬಯಕೆಗಳಲ್ಲಿ ಹೋಗುತ್ತಿದೆ ಹಳೆ ಬಾಳು, ಹೊಸ ಬಾಳು ಬರುತಲಿದೆ ‘ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವನವನ್ನು ವಾಚಿಸಿದರು. ಅಭಿವೃದ್ಧಿ ಮತ್ತು ಉತ್ತಮ ಭರವಸೆಯ ಅಮೃತ ಕಾಲದ ಆಶಯಗಳನ್ನು ಈ ಬಜೆಟ್ ಈಡೇರಿಸಲಿದೆ ಎಂದು ಹೇಳಿದರು.
_ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ-ಸಪೋರ್ಟ್ ಮಾಡಲು ಕ್ಲಿಕ್ಕಿಸಿ