ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ ಜಿಲ್ಲಾಡಳಿತಗಳಿಗೆ ಆದೇಶ ನೀಡಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವ ಇಲಾಖೆ, ಮಳೆಯಿಂದಾಗಿ ನೀರು ನಿಂತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಘಿ, ಮಲೇರಿಯಾದಂತ ರೋಗಗಳ ಸಂಖ್ಯೆ ಕೂಡ ಉಲ್ಬಣಿಸುವ ಸಾಧ್ಯತೆ ಇದ್ದು, ಈ ರೋಗಗಳ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಮಾರ್ಗಸೂಚಿ ಪ್ರಕಟಿಸಿದೆ.
ನಾಗರಿಕರಲ್ಲಿ ಅನಾರೋಗ್ಯ ಪರಿಸ್ಥಿತಿ ಎದುರಾದರೆ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಸನ್ನದ್ಧವಾಗಿರುವಂತೆ ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.

ಆರೋಗ್ಯ ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗಗಳ ನಿರ್ವಹಣೆಗಾಗಿ ಸಮಗ್ರ ಕ್ರಿಯಾ ಯೋಜನೆ ಕೈಗೊಳ್ಳುವುದು. ಮಾನವ ಸಂಪನ್ಮೂಲ, ಪರೀಕ್ಷಾ ಕಿಟ್, ಔಷಧಿಗಳು ಲಭ್ಯವಿರುವಂತೆ ನೋಡಿಕೊಳ್ಳುವುದು ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ನಾಗರಿಕರಿಗೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಈ ದಿಸೆಯಲ್ಲಿ ಜಿಲ್ಲಾಮಟ್ಟದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ಚಿಕಿತ್ಸಾ ಸೇವೆಗಳನ್ನು ನೀಡಲು ಎಲ್ಲ ತಯಾರಿ ಮಾಡಿಕೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
_CLICK to Follow us on DailyHunt