ಮುಖ್ಯಮಂತ್ರಿ- ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನ; ಪ್ರಧಾನಿ ನರೇಂದ್ರ ಮೋದಿ ಚಾಲನೆ

0
184

ದೆಹಲಿ: ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಒಂದು ದಿನದ ಜಂಟಿ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ನಂತರ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲ್ ಇಂಡಿಯಾ ಅಭಿಯಾನದ ಅಗತ್ಯ ಭಾಗವಾದ ತಂತ್ರಜ್ಞಾನವನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಪರಿಗಣಿಸುತ್ತಿದೆ. ವಿದ್ಯುನ್ಮಾನ ನ್ಯಾಯಾಲಯ ಅಂದರೆ ಇ-ಕೋರ್ಟ್ ಯೋಜನೆಯನ್ನು ಅಭಿಯಾನದೋಪಾದಿಯಲ್ಲಿ ದೇಶಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಕೋವಿಡ್ ಸಾಂಕ್ರಾಮಿಕದ ವೇಳೆ ನ್ಯಾಯಾಲಯಗಳು ಡಿಜಿಟಲ್ ವಿಧಾನದಲ್ಲಿಯೇ ಕಾರ್ಯ ನಿರ್ವಹಿಸಿದ್ದವು. ಇದನ್ನು ಮುಂದುವರಿಸುವ ಹಾಗೂ ಸುಧಾರಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ಗಮನ ಹರಿಸಬೇಕು ಎಂದರು. ನ್ಯಾಯಾಂಗವು ಸಂವಿಧಾನದ ಪಾಲಕನಾಗಿದ್ದರೆ, ಶಾಸಕಾಂಗವು ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಇದು ದೇಶದಲ್ಲಿ ಕಾಲಮಿತಿಯೊಳಗೆ ನ್ಯಾಯಾಂಗ ವ್ಯವಸ್ಥೆ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಮಾರ್ಗಸೂಚಿಯನ್ನು ರೂಪಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯ ಪಟ್ಟರು. ನ್ಯಾಯ ಪ್ರಕ್ರಿಯೆಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸಲು ಸ್ಥಳೀಯ ನ್ಯಾಯಾಲಯಗಳಲ್ಲಿ ಮಾತೃಭಾಷೆಯಲ್ಲಿ ವಿಚಾರಣೆ ನಡೆಸುವುದು ಹಾಗೂ ತೀರ್ಪು ನೀಡುವುದು ಅತಿ ಅಗತ್ಯವಾಗಿದೆ. ಇದರಿಂದ ಸಾಮಾಜಿಕ ನ್ಯಾಯ ಪಾಲನೆಯಾದಂತಾಗುತ್ತದೆ ಎಂದರು. ದೇಶದ ಎಲ್ಲಾ ಹಂತದ ನ್ಯಾಯಾಲಯಗಳಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಇದರಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಕೂಡ ಮಹತ್ವವಾದುದು ಎಂದು ಹೇಳಿದರು. 2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸಲಿದ್ದು, ಆ ಸಮಯದಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆ ಹೇಗಿರಬೇಕು ಎಂಬ ದೂರದರ್ಶಿತ್ವ ಹೊಂದಿರಬೇಕು. ಸುಲಭ, ತ್ವರಿತ ಹಾಗೂ ಸರ್ವರಿಗೂ ಸಮಾನ ನ್ಯಾಯ ಒದಗಿಸುವಂತೆ ವ್ಯವಸ್ಥೆ ರೂಪಿಸಲು ಇಂದಿನಿಂದಲೇ ಭದ್ರ ಬುನಾದಿ ಹಾಕಬೇಕು ಎಂದು ಕರೆ ನೀಡಿದರು. ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ಶಾಸಕಾಂಗ ವ್ಯವಸ್ಥೆಯಲ್ಲಿ ಯಾವುದೇ ನೀತಿ ರೂಪಿಸಬೇಕಾದರೆ ಪರಿಣಾಮಕಾರಿ ಚರ್ಚೆ, ಸ್ಪಷ್ಟತೆ ಹಾಗೂ ಪಾರದರ್ಶಕತೆ ಹೊಂದಿದ್ದರೆ ನ್ಯಾಯಾಲಯದ ಮೇಲೆ ಒತ್ತಡ ಕಡಿಮೆಯಾಗುತ್ತದೆ. ನೀತಿ ರೂಪಿಸುವುದು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲವಾದರೂ, ಅದನ್ನು ಪ್ರಶ್ನಿಸಿ ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ಕಡೆಗಣಿಸಲಾಗದು ಎಂದರು. ಜೊತೆಗೆ, ತಹಶೀಲ್ದಾರ್, ಮುನ್ಸಿಪಲ್ ಅಧಿಕಾರಿಗಳಿಂದ ಮೇಲ್ಮಟ್ಟದ ಅಧಿಕಾರಿಗಳು ಸಮರ್ಥರಾಗಿ ಕಾರ್ಯ ನಿರ್ವಹಿಸಿದರೆ, ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ಪ್ರಕರಣಗಳ ತನಿಖೆ ನಡೆಸಿದರೆ, ಜನರು ನ್ಯಾಯ ಕೋರಿ ನ್ಯಾಯಾಲಯದ ಮೆಟ್ಟಿಲೇರುವ ಅಗತ್ಯ ಬೀಳುವುದಿಲ್ಲ. ಇದರಿಂದ ಕೂಡ ನ್ಯಾಯದಾನ ಸರಳವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇಂದು ಸಾರ್ವಜನಿಕ ಹಿಸಾತಕ್ತಿ ಅರ್ಜಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ತಡೆಯುವ ತುರ್ತು ಅಗತ್ಯವಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಕೇಂದ್ರ ಸರ್ಕಾರ ಆರಂಭಿಸಿರುವ ಇ-ಕೋರ್ಟ್ ಅಭಿಯಾನ ಕೋವಿಡ್ ಸಾಂಕ್ರಾಮಿಕ ವೇಳೆ ಸಾಕಷ್ಟು ಸಹಕಾರಿಯಾಯಿತು. ದೇಶದ 18 ಸಾವಿರಕ್ಕೂ ಹೆಚ್ಚು ನ್ಯಾಯಾಲಯಗಳನ್ನು ಗಣಕೀಕರಣಗೊಳಿಸಲಾಗಿದ್ದು, ವರ್ಚುವಲ್ ವಿಚಾರಣೆ ಮೂಲಕ ಜನರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಯಿತು ಎಂದು ಹೇಳಿದರು.

pic snap from video

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here