ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಎಂಜಿನಿಯರಿಂಗ್, ಡಿಪ್ಲೋಮಾ ಹಾಗೂ ITI ಪದವೀಧರರಾಗಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯೋಜಿಸಿದ್ದ ‘ಸರ್ವರಿಗೂ ಉದ್ಯೋಗ’ ಹಾಗೂ ‘ಬೆಳಗಾವಿ ಉದ್ಯೋಗ ಮೇಳ’ವನ್ನು ಉದ್ಘಾಟಿಸಿದರು.
ಈ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು, ಯುವಕರು ಉದ್ಯೋಗಾವಕಾಶ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಲು ‘ಎಲ್ಲರಿಗೂ ಉದ್ಯೋಗ’ ಎಂಬ ಕಾರ್ಯಕ್ರಮದಡಿ ಮೇಳ ನಡೆಸುತ್ತಿದ್ದು, ಈಗಾಗಲೇ 5 ಸಾವಿರದ 600 ಯುವಕರು ನೋಂದಾಯಿಸಿಕೊಂಡಿದ್ದಾರೆ. ಮೇಳದಲ್ಲಿ 57 ಕಂಪನಿಗಳು ನೇರವಾಗಿ ಮತ್ತು 14 ಕಂಪನಿಗಳು ಆನ್ ಲೈನ್ ಮೂಲಕ ಭಾಗವಹಿಸಲಿದ್ದಾರೆ ಎಂದರು. ಅಭ್ಯರ್ಥಿಗಳು ಗರಿಷ್ಠ 3 ಕಂಪನಿಗಳನ್ನು ಆಯ್ಕೆಮಾಡಿ, ಸಂದರ್ಶನ ಎದುರಿಸಬಹುದಾಗಿದ್ದು, ಆಯ್ಕೆಯಾದ ಯುವಕರಿಗೆ ಉದ್ಯೋಗಾವಕಾಶ ದೊರೆಯಲಿದೆ. ತಿರಸ್ಕೃತಗೊಂಡ ಅಭ್ಯರ್ಥಿಗಳಿಗೆ ಸೂಕ್ತ ಕೌಶಲ್ಯ ಮೈಗೂಡಿಸಿಕೊಳ್ಳಲು ‘ಎಲ್ಲರಿಗೂ ಉದ್ಯೋಗ’ ಕಾರ್ಯಕ್ರಮದಡಿ ಕೌಶಲ್ಯ ತರಬೇತಿಯನ್ನು ನೀಡಲಾಗುವುದು ಎಂದು ಸಚಿವರು ಹೇಳಿದರು. ಅಂತಾರಾಷ್ಟ್ರೀಯ ವಲಸೆ ಕೇಂದ್ರದಿಂದ ರಾಜ್ಯದ ಕೌಶಲ್ಯಾಭಿವೃದ್ಧಿ ನಿಗಮ ಪರವಾನಗಿ ಪಡೆದಿದ್ದು, ಯುವಕರಿಗೆ ದೇಶ-ವಿದೇಶಗಳಲ್ಲಿ ಉದ್ಯೋಗಾವಕಾಶ ದೊರೆಯಲು ಅನುಕೂಲವಾಗಿಸಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ , ನಗರಾಬಿವೃದ್ಧಿ ಸಚಿವ ಭರತಿ ಬಸವರಾಜ , ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ್ ಪಾಟೀಲ್ ಸೇರಿದಂತೆ ಇತರ ಗಣ್ಯಮಾನ್ಯರು ಉಪಸ್ತಿತರಿದ್ದರು.
