ವಿಧಾನಸಭೆ: ರಾಜ್ಯ ಪೊಲೀಸ್ ಇಲಾಖೆಗೆ ಅಗತ್ಯವಿರುವ 4 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿಂದು ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸ್ ಇಲಾಖೆಯನ್ನು ಬಲಪಡಿಸಲು ಅಗತ್ಯವಿರುವ ಸಿಬ್ಬಂದಿ ನೇಮಕದ ಜೊತೆಗೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಈ ಕಾಮಗಾರಿಗಳಿಗೆ ಮುಂದಿನ ತಿಂಗಳು ಟೆಂಡರ್ ಕರೆಯಲಾಗುವುದು ಎಂದು ಹೇಳಿದರು. ಮೇಲ್ಸೇತುವೆ ವಿಸ್ತರಣೆ ಯೋಜನೆಗೆ 244 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರದ ಬಳಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಗಳನ್ನು ಗುರುತಿಸಿ, ಸ್ಲಮ್ ಬೋರ್ಡ್ ಮೂಲಕ ಆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸದನ ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ಕುರಿತು ಕೈಗೊಂಡಿರುವ ನಿರ್ಧಾರವನ್ನು ಸರ್ವಾನುಮತದಿಂದ ಖಂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ತನ್ನ ನಿಲುವನ್ನು ಕೇಂದ್ರದ ಮುಂದೆ ಸ್ಪಷ್ಟಪಡಿಸಿದೆ. ಮೇಕೆದಾಟು ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದು, ಈ ಯೋಜನೆ ಕುರಿತು ತಮಿಳುನಾಡು ಸರ್ಕಾರ ಅಡ್ಡಿಪಡಿಸುತ್ತಿರುವುದು ಸೂಕ್ತವಲ್ಲ. ಅಗತ್ಯವಾದರೆ ಸರ್ಕಾರ, ಪ್ರಧಾನಿ ಅವರ ಬಳಿ ನಿಯೋಗ ತೆಗೆದುಕೊಂಡು ಹೋಗಲಿದೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸದನದಲ್ಲಿ ರಾಜ್ಯ ಸರ್ಕಾರ ಮೇಕೆದಾಟು ವಿಷಯ ಕುರಿತು ನಿರ್ಣಯ ತೆಗೆದುಕೊಂಡು, ಕೇಂದ್ರ ಸರ್ಕಾರದ ಮುಂದಿಡಬೇಕು. ಬೆಂಗಳೂರು ಜಾಗತಿಕ ಮಟ್ಟದ ನಗರವಾಗಿ ಹೊರಹೊಮ್ಮುತ್ತಿದೆ. ಈ ನಗರಕ್ಕೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳು ಹೆಚ್ಚಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ, ತಮಿಳುನಾಡಿನೊಂದಿಗೆ ಕಾನೂನಾತ್ಮಕ ಹೋರಾಟ ಅಗತ್ಯವಾಗಿದ್ದು, ಜಾಗರೂಕತೆಯಿಂದ ರಾಜ್ಯ ಸರ್ಕಾರ ವಾದ ಮಂಡಿಸುವ ಮೂಲಕ ತನ್ನ ಹಕ್ಕನ್ನು ಪಡೆಯುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಈ ಹಂತದಲ್ಲಿ ಎಲ್ಲ ಪಕ್ಷಗಳ ಸದಸ್ಯರು ಪಕ್ಷಭೇದ ಮರೆತು ಮೇಕೆದಾಟು ಯೋಜನೆ ಶೀಘ್ರ ಜಾರಿಗೊಳಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.