ದೇಶದ ದ್ರವೀಕೃತ ನ್ಯಾನೋ ಡಿಎಪಿ ರಸಗೊಬ್ಬರ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.ಇದರಿಂದ ದೇಶದ ರೈತರಿಗೆ ಅನುಕೂಲವಾಗಲಿದೆ. ಈ ಸಂಬಂಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಾ. ಮನ್ಸುಖ್ ಮಾಂಡವೀಯಾ ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದಾರೆ.
ನ್ಯಾನೋ ಯೂರಿಯಾದ ಬಳಿಕ ಇದೀಗ ಸರ್ಕಾರ ನ್ಯಾನೋ ಡಿಎಪಿ ಬಳಕೆಗೆ ಅನುಮತಿ ನೀಡಿದೆ. ಅಲ್ಲದೇ, ಕೇಂದ್ರ ಕೃಷಿ ಸಚಿವಾಲಯವು ರಸಗೊಬ್ಬರ ನಿಯಂತ್ರಣ ಆದೇಶವನ್ನು ಸಹ ಹೊರಡಿಸಲಿದೆ.
ಇದರಿಂದ ದೇಶದ ರೈತರ ಕಾರ್ಯವೈಖರಿ ಹಾಗೂ ಕೃಷಿ ಕ್ಷೇತ್ರದ ಮೇಲೆ ಗಣನೀಯ ಬದಲಾವಣೆ ಕಂಡುಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಕನಸು ಸಕಾರಗೊಳಿಸುವತ್ತ ಇದು ಮಹತ್ತರ ಹೆಜ್ಜೆಯಾಗಿದೆ. ಚೀಲಗಳಲ್ಲಿ ದೊರೆಯುತ್ತಿದ್ದ ಡಿಎಪಿ ಇನ್ನು ಮುಂದೆ ಬಾಟಲ್ ಗಳಲ್ಲಿ ಲಭ್ಯವಾಗಲಿದೆ ಎಂದು ಮನ್ಸುಖ್ ಮಾಂಡವೀಯಾ ತಿಳಿಸಿದ್ದಾರೆ.