ದೆಹಲಿ: ವಿಜ್ಞಾನ ಭವನದಲ್ಲಿಂದು ನಡೆದ ಉದ್ಯಮಿ ಭಾರತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಂಎಸ್ ಎಂ ಇ ಕಾರ್ಯಕ್ಷಮತೆ ಹೆಚ್ಚಳ ಮತ್ತು ವೇಗವರ್ಧನೆ ಯೋಜನೆಗೆ ಚಾಲನೆ ನೀಡಿದರು. ಅಲ್ಲದೆ, ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದ ನೂತನ ವೈಶಿಷ್ಟ್ಯಗಳನ್ನು ಉದ್ಘಾಟಿಸಿದರು.

ಪಿಎಂಇಜಿಪಿ ಫಲಾನುಭವಿಗಳಿಗೆ 550 ಕೋಟಿ ರೂಪಾಯಿ ನೆರವನ್ನು ಇದೇ ವೇಳೆ ವರ್ಗಾಯಿಸಿದರು. ಎಂಎಸ್ಎಂಇ ಐಡಿಯಾ ಹ್ಯಾಕಥಾನ್ 2022ರ ಫಲಿತಾಂಶವನ್ನು ಪ್ರಕಟಿಸಿ, ರಾಷ್ಟ್ರೀಯ ಎಂಎಸ್ಎಂಇ ಪುರಸ್ಕಾರ ಪ್ರದಾನ ಮಾಡಿದರು. ಬಳಿಕ ಪ್ರಧಾನಿ, ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳು ಭಾರತವನ್ನು ಆತ್ಮನಿರ್ಭರಗೊಳಿಸುವ ಮಾರ್ಗವಾಗಿದ್ದು, ದೇಶವನ್ನು ಸಶಕ್ತಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ. 21ನೇ ಶತಮಾನದಲ್ಲಿ ಎಂಎಸ್ಎಂಇ ವಲಯ ಅಗಾಧವಾಗಿ ಬೆಳೆದಿದ್ದು, ಇದರಿಂದ ದೇಶದ ರಫ್ತು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು. ಇಂದು ಭಾರತದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆ ಪ್ರವೇಶಿಸಿವೆ. ಈ ಕ್ಷೇತ್ರದ ಸಾಮರ್ಥ್ಯ ವರ್ಧನೆಗೆ ಕಳೆದ 8 ವರ್ಷಗಳಿಂದ ಸರ್ಕಾರ ನಿರಂತರವಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ನೂತನ ನೀತಿ ಜಾರಿಗೊಳಿಸಲಾಗಿದ್ದು, ಪ್ರತಿ ಜಿಲ್ಲೆಯ ಉತ್ಪನ್ನವನ್ನು ಜಾಗತಿಕಗೊಳಿಸಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದರು.
ಮೇಕ್ ಇನ್ ಇಂಡಿಯಾಗೆ ಸ್ಥಳೀಯ ಬೆಂಬಲ ದೊರೆಯುವಲ್ಲಿ ಎಂಎಸ್ಎಂಇ ಪಾತ್ರ ಪ್ರಮುಖವಾಗಿದೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸರ್ಕಾರ ಕೆಲಸ ಮಾಡುತ್ತಿದ್ದು, ದೇಶದ ಒಟ್ಟು ಆದಾಯದಲ್ಲಿ ಎಂಎಸ್ಎಂಇ ವಲಯದ ಕೊಡುಗೆ ಶೇಕಡ 30ರಷ್ಟಿದೆ. ದೇಶ 100 ರೂಪಾಯಿ ಗಳಿಸಿದರೆ, ಅದರಲ್ಲಿ 30 ರೂಪಾಯಿ ಈ ವಲಯದಿಂದ ಬರುತ್ತಿದೆ ಎಂದು ಹೇಳಿದರು.
ಎಂಎಸ್ಎಂಇ ವಲಯದಲ್ಲಿ ಕೋಟ್ಯಾಂತರ ಜನ ಗ್ರಾಮೀಣ ಭಾಗದಿಂದ ಬಂದವರಿದ್ದಾರೆ. ಕಳೆದ 8 ವರ್ಷಗಳಿಂದ ಈ ಕ್ಷೇತ್ರದ ಬಜೆಟ್ ಗಾತ್ರವನ್ನು ಶೇಕಡ 650ರಷ್ಟು ಹೆಚ್ಚಳ ಮಾಡಲಾಗಿದೆ. 11 ಕೋಟಿ ಜನ ಈ ಕ್ಷೇತ್ರದೊಂದಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಂಬಂಧ ಹೊಂದಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತುರ್ತು ಸಾಲ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿ ಎಂಎಸ್ಎಂಇ ವಲಯಕ್ಕೆ ಆರ್ಥಿಕ ನೆರವು ನೀಡಲಾಯಿತು. ಈ ಅವಧಿಯಲ್ಲಿ ಮೂರೂವರೆ ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಯಿತು. ಇದರಿಂದ ಸರಿಸುಮಾರು ಎರಡೂವರೆ ಲಕ್ಷ ಉದ್ಯೋಗಗಳು ಉಳಿದುಕೊಂಡವು.

ಮುಂದಿನ ಮಾರ್ಚ್ ವರೆಗೂ ಈ ಯೋಜನೆ ವಿಸ್ತರಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಕೇಂದ್ರ ಎಂಎಸ್ಎಂಇ ಸಚಿವ ನಾರಾಯಣ ರಾಣೆ, ಕಳೆದ ಒಂದು ವರ್ಷದಲ್ಲಿ ಎಂಎಸ್ಎಂಇ ವಲಯದ ಉತ್ಪಾದನೆ ಶೇಕಡ 37ರಷ್ಟು ವೃದ್ಧಿಯಾಗಿದೆ. ಜಿಡಿಪಿಯಲ್ಲಿ ಎಂಎಸ್ಎಂಇ ಕೊಡುಗೆ ಶೇಕಡ 30ರಷ್ಟಿದೆ. ರಫ್ತಿನಲ್ಲೂ ಈ ವಲಯ ಪ್ರಗತಿ ಸಾಧಿಸಿದ್ದು, ಕೋವಿಡ್ ಸಮಯದಲ್ಲಿ ಸರ್ಕಾರ ನೀಡಿದ ಆರ್ಥಿಕ ನೆರವಿನಿಂದ ಬಹಳಷ್ಟು ಲಾಭವಾಗಿದೆ ಎಂದು ಹೇಳಿದರು.
CLICK to Follow us on DailyHunt
CLICK to Follow us on ShareChat