ದಕ್ಷಿಣ ಟರ್ಕಿಯಲ್ಲಿ ಪ್ರಬಲ ಭೂಕಂಪ ;ಭೂಕಂಪದ ತೀವ್ರತೆ 7.9 ದಾಖಲು ; ಭಾರತದಿಂದ ರಕ್ಷಣಾ ತಂಡ ರವಾನೆ
ಟರ್ಕಿಯಲ್ಲಿ ನಿನ್ನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 4 ಸಾವಿರದ 600ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಮತ್ತು 2,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಏರುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ಸತತ ಮೂರು ಬಾರಿ ಭೂಮಿ ಕಂಪಿಸಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ.
7.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕಳೆದ 100 ವರ್ಷಗಳಲ್ಲಿಯೇ ಟರ್ಕಿಯಲ್ಲಿ ನಡೆದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ. ಟರ್ಕಿಯ 10 ನಗರಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ. ಭೂಕಂಪ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳೊಂದಿಗೆ ಪ್ರಯಾಣ ಬೆಳೆಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, NDRF ಮತ್ತು ವೈದ್ಯಕೀಯ ತಂಡಗಳ ಮೊದಲ ಭಾರತೀಯ ವಿಮಾನ ಟರ್ಕಿ ತಲುಪಿದೆ. ಭೂಕಂಪ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ಮತ್ತು ಪರಿಹಾರ ಕ್ರಮಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ಈ ಸೂಚನೆ ಹಿನ್ನೆಲೆಯಲ್ಲಿ ರಕ್ಷಣಾ ತಂಡ ಟರ್ಕಿಗೆ ಧಾವಿಸಿದೆ. ವಿಶೇಷ ಶ್ವಾನದಳಗಳು ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಯನ್ನು ಒಳಗೊಂಡಿರುವ NDRFನ ಎರಡು ತಂಡಗಳು ಭೂಕಂಪ ಪೀಡಿತ ಪ್ರದೇಶಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಟರ್ಕಿಗೆ ಬಂದಿಳಿದಿವೆ. ಪರಿಹಾರ ಕ್ರಮಗಳನ್ನು ಟರ್ಕಿ ಸರ್ಕಾರದೊಂದಿಗೆ ಸಮನ್ವಯದಿಂದ ಕೈಗೊಳ್ಳಲಾಗುವುದು. ಮತ್ತೊಂದೆಡೆ, ಸಿರಿಯಾದಲ್ಲಿಯೂ ಪ್ರಬಲ ಭೂಕಂಪ ಸಂಭವಿಸಿದೆ. 1300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು 700ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಿರಿಯಾದ ಅಲೆಪ್ಪೊ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಕಟ್ಟಡಗಳು ಕುಸಿದಿವೆ. ಲೆಬನಾನ್ ಮತ್ತು ಸೈಪ್ರಸ್‌ನಲ್ಲೂ ಕಂಪನದ ಅನುಭವವಾಗಿದೆ.