ಬೆಂಗಳೂರು: “ಮನೆಗೊಂದು ಚಿತ್ರಕಲಾ ಕೃತಿಗಳನ್ನು ಖರೀದಿಸಿ ಕಲಾವಿದರ ಬದುಕನ್ನು ಹಸನಗೊಳಿಸಲು ಪ್ರತಿಯೊಬ್ಬರು ಮುನ್ನುಡಿ ಬರೆಯಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ ಒಂದು ಚಿತ್ರ ಸಂತೆಗೆ ಚಾಲನೆ ನೀಡಿದರು.
ಬಳಿಕ ಸಿದ್ದರಾಮಯ್ಯ, ಪ್ರಸಕ್ತ ಚಿತ್ರಸಂತೆಯನ್ನು ಮಹಿಳಾ ಸಬಲೀಕರಣ ಧ್ಯೇಯದೊಂದಿಗೆ ಆಯೋಜಿಸಲಾಗಿದ್ದು, ಸಮಾಜದಲ್ಲಿ ಅತಿ ಹೆಚ್ಚು ಶೋಷಣೆಗೆ, ತಾರತಮ್ಯಕ್ಕೆ ಒಳಗಾಗುವ ಮಹಿಳೆಯರ ಸಶಕ್ತೀಕರಣಕ್ಕಾಗಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣಕ್ಕೆ ಅನುಕೂಲವಾಗಿದೆ ಎಂದರು.
ಈ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
“ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಏಳನೇ ಬಾರಿ ಚಿತ್ರಸಂತೆ ಉದ್ಘಾಟಿಸುತ್ತಿದ್ದು, ರಾಜ್ಯದ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಚಿತ್ರದ ಮೂಲಕ ದೇಶ ಮತ್ತು ಜಗತ್ತಿಗೆ ತಿಳಿಸಬೇಕೆಂಬ ಪ್ರಯತ್ನವನ್ನು ಚಿತ್ರಕಲಾ ಪರಿಷತ್ತು ಮಾಡುತ್ತಿದೆ. ಚಿತ್ರಸಂತೆ ಆಯೋಜಿಸಿರುವ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆಗಳು. ಚಿತ್ರಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಜಗತ್ತಿನ ಯಾವ ಭಾಗದಲ್ಲಿಯೂ ಚಿತ್ರಸಂತೆ ನಡೆಯುವುದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಚಿತ್ರಸಂತೆ ನಡೆಯುವುದು ಹೆಮ್ಮೆಯ ಸಂಗತಿ. ಅನೇಕ ಚಿತ್ರಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸಿ, ಆಸಕ್ತರಿಗೆ ಕೊಳ್ಳುವ ಅವಕಾಶವನ್ನೂ ಚಿತ್ರಸಂತೆ ಒದಗಿಸುತ್ತಿದೆ. ಒಂದು ದಿನಕ್ಕೆ ನಾಲ್ಕು ಲಕ್ಷ ಜನರು ಭೇಟಿ ನೀಡುತ್ತಾರೆ. ಬೆಂಗಳೂರಿಗರಿಗೆ ಇದೊಂದು ಸುವರ್ಣಾವಕಾಶ. ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಿರುವುದು ವಿಶೇಷ. ಹೆಣ್ಣುಮಕ್ಕಳ ಪರವಾಗಿ ಕೆಲಸ ಮಾಡಿದ ಮಹಾತ್ಮ ಗಾಂಧಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ, ದತ್ತಮ್ಮ ಮೊದಲಾದವರ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಒಬ್ಬ ಪುರುಷನಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತಾಗುತ್ತದೆ. ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಕಲಿತಂತಾಗುತ್ತದೆ. ಸಂವಿಧಾನದ ಪೀಠಿಕೆಯನ್ನು ಕೂಡ ಇಲ್ಲಿ ಪ್ರದರ್ಶಿಸಲಾಗಿದ್ದು, ಸಮಾಜದ ಎಲ್ಲಾ ವರ್ಗದ ಜನರನ್ನೂ ಪ್ರತಿನಿಧಿಸುತ್ತಿದೆ. ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಪ್ರಭಾವಶಾಲಿಯಾಗಿದೆ. ಚಿತ್ರದ ಮೂಲಕ ಜನಜೀವನ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಬಹುದಾಗಿದೆ. ಚಿತ್ರಕಲಾ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ. – ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 22ನೇ ಚಿತ್ರಸಂತೆಯ ಉದ್ಘಾಟನಾ ಸಮಾರಂಭದಲ್ಲಿ ನನ್ನ ಮಾತುಗಳು” ಎಂದು ಸಿಎಂ ಸಿದ್ಧರಾಮಯ್ಯ X (ಟ್ವೀಟ್) ಮೂಲಕ ತಿಳಿಸಿದ್ದಾರೆ.

ಈ ನಡುವೆ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆಯಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿರುವ ಸಾವಿರಾರು ಕಲಾವಿದರು ಪಾಲ್ಗೊಂಡಿದ್ದಾರೆ. 22 ರಾಜ್ಯಗಳಿಂದ 3470 ಕಲಾವಿದರು ಅರ್ಜಿ ಸಲ್ಲಿಸಿದ್ದು ಈ ಪೈಕಿ 1500 ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ.
ರಾತ್ರಿ 9 ಗಂಟೆಯವರೆಗೂ ನಡುವೆ ಚಿತ್ರಸಂತೆಯನ್ನು ಕಣ್ತುಂಬಿಕೊಳ್ಳಲು ಹಾಗೂ ಕಲಾಕೃತಿಗಳ ಖರೀದಿಗೆ ಸಾವಿರಾರು ಮಂದಿ ಆಗಮಿಸಿದ್ದಾರೆ.