Wednesday, February 19, 2025
Homeಅಂಕಣಗಳುಕೋರೊನ ಸಮರದಲ್ಲಿ ಆಶಾ ಕಾರ್ಯಕರ್ತೆಯರು..!

ಕೋರೊನ ಸಮರದಲ್ಲಿ ಆಶಾ ಕಾರ್ಯಕರ್ತೆಯರು..!

”ಆಶಾ”  Accredited Social Health Activist.

ಆಶಾ ಕಾರ್ಯಕರ್ತೆಯರ ಒಟ್ಟು ಸಂಖ್ಯೆ(ಅಂದಾಜು)- 10,23,136 ದೇಶದಲ್ಲಿ ,  ಕರ್ನಾಟಕದಲ್ಲಿ 41,628.

ಇದು ಕೊರೊನಾ ವಿರುದ್ಧ ಸಮರದಲ್ಲಿ ನೈಜ ಸೇನಾನಿಗಳಾಗಿ ಊರೂರುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಚಿಕ್ಕ ಲೇಖನವಿದು.

ಕೋವಿಡ್-‌19 ಸಾಂಕ್ರಾಮಿಕ ಸಂಕಷ್ಟ ಕಾಲದಲ್ಲಿದೇಶದ ಸರ್ವ ಜನರು ಲಾಕ್‌ಡೌನ್‌ ಹೆಸರಿನಲ್ಲಿ ಮನೆಯೊಳಗೆ ಬೆಚ್ಚಗಿದ್ದಾರೆ. ಆದರೆ, ವೈದ್ಯಕೀಯ ಸಿಬ್ಬಂದಿ ರೋಗಿಗಳ ಚಿಕಿತ್ಸೆಗಾಗಿ ಪಣತೊಟ್ಟು ನಿಂತಿದ್ದಾರೆ. ಆಶಾ ಕಾರ್ಯಕರ್ತೆಯರೆಂಬ ಗುಲಾಬಿ ದಿರಿಸಿನ ಹೆಣ್ಮಕ್ಕಳು ಜನರ ರಕ್ಷಣೆಗಾಗಿ ಅಕ್ಷರಶಃ ಬೀದಿ ಹೋರಾಟ ನಡೆಸುತ್ತಿದ್ದಾರೆ. ತಮ್ಮ ವ್ಯಾಪ್ತಿಯ ಪ್ರತಿ ಮನೆಯಲ್ಲಿ ಯಾರ್ಯಾರು ಇದ್ದಾರೆ, ಯಾರಿಗಾದರೂ ಜ್ವರ, ಕೆಮ್ಮು ಮೊದಲಾದ ಕೊರೊನಾ ಲಕ್ಷಣಗಳಿವೆಯಾ? ಮನೆಗೆ ಬೇರೆ ಊರಿನಿಂದ ಯಾರಾದರೂ ಬಂದಿದ್ದಾರಾ ಎಂಬೆಲ್ಲ ಮಾಹಿತಿಗಳನ್ನು ದಾಖಲಿಸಿಕೊಂಡು ಆರೋಗ್ಯ ಇಲಾಖೆಗೆ ನೀಡುವ ಕೆಲಸ ಇವರದು. ಮುಂಬಯಿಯ ಧಾರಾವಿಯಂಥ ಪರಮ ಕೊಳೆಗೇರಿಗಳಿಂದ ಹಿಡಿದು ಎಲ್ಲೆಡೆ ಸಂಚರಿಸುತ್ತಿದ್ದಾರೆ. ಅವರಿಗೂ ಕುಟುಂಬಗಳಿವೆ, ಮಕ್ಕಳಿದ್ದಾರೆ. ಊರೂರು ತಿರುಗುವಾಗ ಯಾವ ಕ್ಷಣದಲ್ಲಿ ಬೇಕಾದರೂ ಸೋಂಕು ತಗುಲುವ ಆತಂಕ ಇದ್ದೇ ಇದೆ. ದಿನಕ್ಕೆ ಐದಾರು ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗುವ ಇವರಿಗೆ ಊಟ ತಿಂಡಿಯೂ ಸಿಗುವುದಿಲ್ಲ.  ನೀರನ್ನು ಸಮೇತ ಬ್ಯಾಗಲ್ಲೇ ಇಟ್ಟುಕೊಂಡು ತಿರುಗಬೇಕು. ಇಷ್ಟೆಲ್ಲ ಕಷ್ಟಪಟ್ಟು ಸಮೀಕ್ಷೆಗೆ ಹೋದರೆ ಜನ ಸರಿಯಾಗಿ ಮಾಹಿತಿ ನೀಡುವುದು ಬಿಡಿ, ಬೈದು ಓಡಿಸುತ್ತಾರೆ. ಕೆಲವರು ಹಲ್ಲೆಯನ್ನೂ ಮಾಡಿದ್ದಾರೆ. ಮನೆಯೊಳಗೆ ಕರೆಯುವ ಸಹೃದಯತೆ ಇಲ್ಲವೇ ಇಲ್ಲ.  ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿರುವುದರ ಹಿಂದೆ ಆಶಾ ಕಾರ್ಯಕರ್ತೆಯರ ಪಾಲು ದೊಡ್ಡದಿದೆ ಎಂದು ಪ್ರಧಾನಿಯವರೇ ಕೊಂಡಾಡಿದ್ದಾರೆ. ಆದರೆ, ಆಶಾ ಕಾರ್ಯಕರ್ತೆಯರು ಅಂಥ ಮಹಾಗೌರವನ್ನೇನೂ ಬಯಸುತ್ತಿಲ್ಲ. ‘‘ಕ್ಷೇತ್ರ ಕಾರ್ಯದ ವೇಳೆ ಸಾಕಷ್ಟು ನೋವಿನ ಘಟನೆಗಳು ನಡೆದಿವೆ. ನಮಗೆ ಬೇಸರವಿಲ್ಲ. ದೇಶಸೇವೆಯ ದೊಡ್ಡ ಅವಕಾಶ ಎಂಬ ಹೆಮ್ಮೆ ನಮಗೆ,’’ ಎನ್ನುವ ಅವರು ತಮ್ಮ ಕೆಲಸಕ್ಕೆ ಸಹಕಾರ ಕೊಡಿ ಎಂದಷ್ಟೇ ಮನವಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಲವು ಕಡೆಗಳಲ್ಲಿ ಅವರ ಮೇಲೆ ಹಲ್ಲೆನಡೆಯಿತು, ಕೆಲವೆಡೆ ಅವರ ಕಡತಗಳನ್ನು ಕಿತ್ತೆಸೆದರು, ಬಾಯಿಗೆ ಬಂದಂತೆ ನಿಂದಿಸಿದರು. ಆದರೂ ಅವರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯಲಿಲ್ಲ. ಮೂಲಸೌಕರ್ಯಗಳಿಲ್ಲ, ರೋಗಗಳ ಆತಂಕ ತುಂಬಿರುವ ಜಾಗಗಳಲ್ಲಿ ಅವರು ಒಬ್ಬಂಟಿಯಾಗಿ ಸಂಚರಿಸಬೇಕು.. ಅಷ್ಟಾದರೂ ಅವರು ಎದೆಗುಂದಲಿಲ್ಲ. ಸಕಾಲದಲ್ಲಿ ವೇತನ ನೀಡಲಿಲ್ಲವೆಂದು ಬೀದಿಗಿಳಿದು ಪ್ರತಿಭಟಿಸಿದ್ದರು. ಆದರೆ, ಸಂಕಷ್ಟದ ಈ ಕಾಲದಲ್ಲಿ ಅದನ್ನೇ ಬಳಸಿ ಬ್ಲ್ಯಾಕ್‌ಮೇಲ್‌ ಮಾಡಲಿಲ್ಲ.
ಆಶಾ ಕೆಲಸವೇನು? ಒಬ್ಬ ಆಶಾ ಕಾರ್ಯಕರ್ತೆ ದಿನಕ್ಕೆ 25 ಮನೆಯಂತೆ ಸರ್ವೆ ನಡೆಸಬೇಕು. ಪ್ರತಿ ಮನೆಗೆ ದಿನ ಬಿಟ್ಟು ದಿನ ಬಂದು ಆರೋಗ್ಯ ತಪಾಸಣೆ ನಡೆಸಬೇಕು. ಬೆಳಗ್ಗೆ ಊರು ಭೇಟಿ, ಬಳಿಕ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡಬೇಕು.

ಸಾಂದರ್ಭಿಕ ಚಿತ್ರ

ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯ ರಕ್ಷಣೆ, ಗರ್ಭಿಣಿ, ಬಾಣಂತಿ, ಮಕ್ಕಳ ಆರೈಕೆಯಲ್ಲಿ ಬಹುದೊಡ್ಡ ಪಾತ್ರ ವಹಿಸುವ ಆಶಾ ಕಾರ್ಯಕರ್ತೆಯರು ಈಗ ಕೋರೊನಾ ವಿರುದ್ಧದ ಹೋರಾಟದಲ್ಲೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಆದರೆ, ಅವರ ಕರ್ತವ್ಯದಲ್ಲಿ ಸಾಕಷ್ಟು ಅಡ್ಡಿ ಆತಂಕಗಳು ಸೃಷ್ಟಿಯಾಗಿವೆ. ಇವರಿಗೆ ಜನರ ಸಹಕಾರ, ಸರಕಾರದ ಪ್ರೋತ್ಸಾಹ ಬೇಕಾಗಿದೆ.

“ಸೂಕ್ತವಾದ ಗ್ಲೌಸ್‌ಗಳನ್ನು ಒದಗಿಸಿಲ್ಲ, ರಕ್ಷಣಾ ಕಿಟ್‌ಗಳಿಲ್ಲ. ಸಿಂಗಲ್‌ ಪದರ ಮಾಸ್ಕ್‌ ಮಾತ್ರ ಸಿಕ್ಕಿದೆ. – ಜನರು ಸಹಕಾರ ನೀಡುತ್ತಿಲ್ಲ, ಕೆಲವು ಕಡೆ ನಿಂದನೆ, ಕೆಲವು ಕಡೆ ಹಲ್ಲೆಯೂ ನಡೆದಿದೆ.- ದಿನಕ್ಕೆ ಹತ್ತಾರು ಕಿ.ಮೀ. ನಡೆಯಬೇಕು, ಊಟ ಬಿಡಿ ಕೆಲವು ಕಡೆ ನೀರೂ ಸಿಗೋಲ್ಲ. ಈಗ ಜನರಿಗೆ ಆಶಾ ಕಾರ್ಯಕರ್ತೆಯರೇನು ಎನ್ನುವುದರ ಅರಿವಾಗಿದೆ. ಕಠಿಣ ಸನ್ನಿವೇಶಗಳಲ್ಲೂ ಹಿಂಜರಿಯದ ಅವರಿಗೆ ಸರಕಾರ ಕನಿಷ್ಠ ವೇತನ ನೀಡಬೇಕು. ನರ್ಸಿಂಗ್‌ ತರಬೇತಿ ನೀಡಿ ಅರ್ಹರಿಗೆ ಭಡ್ತಿ ನೀಡಬೇಕು. ಜೊತೆಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು.” – ಎಸ್‌. ವರಲಕ್ಷ್ಮಿ ಅಧ್ಯಕ್ಷರು, ಕರ್ನಾಟಕ  ರಾಜ್ಯ ಆಶಾ ಕಾರ್ಯಕರ್ತೆಯರ ಸಂಘ.

“ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಸದ್ಯ ಆಶಾ ಕಾರ್ಯಕರ್ತರಿಗೆ ಗೌರವಧನ ನೀಡಲಾಗ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಶಾ ಕಾರ್ಯಕರ್ತರಿಗೆ ಮೂರು ಸಾವಿರ ಅಥವಾ ಐದು ಸಾವಿರ ಗೌರವಧನ ಕೊಡಲಾಗುತ್ತದೆ” – ಸಚಿವ ಎಸ್.ಟಿ ಸೋಮಶೇಖರ್.

-ಸುರೇಶ ಹಿರೇಮಠ,ಲಿಂಗಸಗೂರು ವರದಿಗಾರರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news