ಮುಂಗಾರು ಆಧಿವೇಶನ:
ದೇಶದಲ್ಲಿ ಸುಮಾರು 5 ಲಕ್ಷ ಅಪಘಾತಗಳು ಸಂಭವಿಸುತ್ತವೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಕಾರುಗಳಲ್ಲಿ ಮುಂದಿನ ಆಸನಗಳಿಗೆ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. 1 ಏರ್ ಬ್ಯಾಗ್ ಗೆ 800 ರೂಪಾಯಿ ವೆಚ್ಚವಾಗುವ ಕಾರಣ, ಹಿಂಬದಿಯಲ್ಲಿ ಎಷ್ಟು ಆಸನಗಳಿವೆಯೋ ಅಷ್ಟಕ್ಕೆ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ಮಾಡಲು ಸಾರಿಗೆ ಇಲಾಖೆ ಚಿಂತಿಸುತ್ತಿದೆ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಅವರು, ಅಪಘಾತದ ಸಂದರ್ಭದಲ್ಲಿ ಪ್ರಾಣ ಹಾನಿ ತಪ್ಪಿಸಲು ಏರ್ ಬ್ಯಾಗ್ ಅಳವಡಿಕೆ ಪ್ರಸ್ತಾವ ಕುರಿತಂತೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಲ್ಲಿ ಎಲೆಕ್ಟ್ರಿಕಲ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ದ್ವಿಚಕ್ರ ವಾಹನಗಳಿಗೆ ಶೇಕಡಾ 607ರಷ್ಟು, ತ್ರಿಚಕ್ರ ವಾಹನಗಳಿಗೆ ಶೇಕಡಾ 175ರಷ್ಟು , ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 300ರಷ್ಟು ಹಾಗೂ ಎಲೆಕ್ಟ್ರಿಕ್ ಬಸ್ ಗಳಲ್ಲಿ ಶೇಕಡಾ 30ರಷ್ಟು ಬೇಡಿಕೆ ಹೆಚ್ಚಳವಾಗುತ್ತಿದೆ ಎಂದು ವಿವರ ನೀಡಿದರು.
ಇ-ವಾಹನಗಳ ಮಾರಾಟ ಹೆಚ್ಚಳವಾಗುತ್ತಿದ್ದು, 2030ರ ಹೊತ್ತಿಗೆ 10 ಲಕ್ಷ ತಲುಪಲಿದೆ. ಇದರಿಂದ ಇಂಧನ ಆಮದು ತಗ್ಗಲಿದ್ದು, ವಾಯುಮಾಲಿನ್ಯದ ಪ್ರಮಾಣವೂ ಇಳಿಮುಖವಾಗಲಿದೆ. ಪೆಟ್ರೋಲ್ ನಲ್ಲಿ 1 ಕಿಲೋ ಮೀಟರ್ ಗೆ 11 ರೂಪಾಯಿ ಆದರೆ, ಡೀಸೆಲ್ ನಲ್ಲಿ ಪ್ರತಿ ಕಿಲೋ ಮೀಟರ್ ಗೆ, ಒಂಭತ್ತೂವರೆ ರೂಪಾಯಿ, CNG ಯಲ್ಲಿ 7 ರೂಪಾಯಿ ವೆಚ್ಚವಾಗಲಿದೆ. ಆದರೆ, ಎಲೆಕ್ಟ್ರಿಕ್ ವಾಹನದಲ್ಲಿ ಕೇವಲ ಒಂದು ರೂಪಾಯಿ ಆಗುತ್ತದೆ. ಪ್ರಸ್ತುತ ಲಿಥಿಯಂ ಅಯಾನ್ ಬ್ಯಾಟರಿಗಳ ವೆಚ್ಚ ಅಧಿಕವಾಗಿದ್ದು, ಮುಂದಿನ 2 ವರ್ಷಗಳಲ್ಲಿ ಇದರ ದರ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ತಿಳಿಸಿದರು.

ಸೌರ ಇಂಧನ ಕುರಿತ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ , ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಸೌರ ವಿದ್ಯುತ್ ನಲ್ಲಿ 100 ಗಿಗಾ ವ್ಯಾಟ್ ಗುರಿ ಹೊಂದಲಾಗಿತ್ತು. ಈಗಾಗಲೇ 57.71 ಗಿಗಾ ವ್ಯಾಟ್ ಸ್ಥಾಪನೆಯಾಗಿದೆ. 48.7 ಗಿಗಾ ವ್ಯಾಟ್ ಅನುಷ್ಠಾನ ಹಂತದಲ್ಲಿದೆ. 16.69 ಗಿಗಾ ವ್ಯಾಟ್ ಗೆ ಟೆಂಡರ್ ಕರೆಯಲಾಗಿದೆ. ಒಟ್ಟಾರೆ 123.10 ಗಿಗಾ ವ್ಯಾಟ್ ಸೋಲಾರ್ ಸಾಮರ್ಥ್ಯ ಸ್ಥಾಪನೆ ಮಾಡಲಾಗುವುದು ಎಂದರು.
ಪವನ ವಿದ್ಯುತ್ ನಲ್ಲಿ 60 ಗಿಗಾ ವ್ಯಾಟ್ ಗುರಿ ಹೊಂದಲಾಗಿದ್ದು, ಈಗಾಗಲೇ 40.79 ಗಿಗಾವ್ಯಾಟ್ ಸ್ಥಾಪಿಸಲಾಗಿದೆ. 11.56 ಗಿಗಾ ವ್ಯಾಟ್ ಅನುಷ್ಠಾನ ಹಂತದಲ್ಲಿದೆ. 2.4 ಗಿಗಾ ವ್ಯಾಟ್ ಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಪ್ರಶ್ನೋತ್ತರ ಕಲಾಪದ ವೇಳೆ ನಿರಂತರವಾಗಿ ಗದ್ದಲ ಮುಂದುವರಿಸಿದ ಹಿನ್ನೆಲೆಯಲ್ಲಿ ,ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಮತ್ತೆ ಸದನ ಸಮಾವೇಶಗೊಂಡಾಗ ಗದ್ದಲದ ನಡುವೆಯೇ ಕಾಗದ ಪತ್ರಗಳ ಮಂಡನೆ ನಡೆಯಿತು. ಗದ್ದಲ ಮುಂದುವರೆದಾಗ ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.
-Follow us on DailyHunt