ವಿಧಾನಸಭೆ: ಕರ್ನಾಟಕ ಧನವಿನಿಯೋಗ ವಿಧೇಯಕ 2022 ಮತ್ತು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ 2022ಕ್ಕೆ ವಿಧಾನಸಭೆಯಲ್ಲಿಂದು ಅನುಮೋದನೆ ದೊರೆಯಿತು. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿವಿಧ ಇಲಾಖಾ ಬೇಡಿಕೆಗಳ ಪ್ರಸ್ತಾವನೆಯನ್ನು ಮಂಡಿಸಿ ಅನುಮೋದನೆ ಪಡೆದ ನಂತರ ವಿಧೇಯಕಗಳನ್ನು ಮಂಡಿಸಿದರು. ಸಭಾಧ್ಯಕ್ಷರು ಮತಕ್ಕೆ ಹಾಕಿದಾಗ ಆಡಳಿತ ಪಕ್ಷದ ಸದಸ್ಯರು ಧ್ವನಿಮತದ ಅಂಗೀಕಾರ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ, ಪ್ರಸಕ್ತ 2021-22ನೇ ಸಾಲಿನಲ್ಲಿ ಮೋಟಾರು ವಾಹನ ತೆರಿಗೆ ಹೊರತುಪಡಿಸಿ ಉಳಿದ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಹೆಚ್ಚಾಗಿದ್ದು, 9 ಸಾವಿರದ 500 ಕೋಟಿ ರೂಪಾಯಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಮೋಟಾರು ವಾಹನ ತೆರಿಗೆ ಸಂಗ್ರಹ ಹೊರತುಪಡಿಸಿ ಉಳಿದ ತೆರಿಗೆ ಸಂಗ್ರಹವಾಗಿದೆ. 7500 ಕೋಟಿ ರೂಪಾಯಿ ಹೆಚ್ಚು ತೆರಿಗೆ ಸಂಗ್ರಹ ನಿರೀಕ್ಷೆಯಿತ್ತು. 9 ಸಾವಿರದ 500 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದರು.
2021-22ನೇ ಸಾಲಿನಲ್ಲಿ 1,19,552 ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿಯಿತ್ತು. 3ನೇ ತ್ರೈಮಾಸಿಕದಲ್ಲಿ ಕೈಗೊಂಡ ಬಿಗಿ ಕ್ರಮ ಹಾಗೂ ಜಾಗೃತ ದಳವನ್ನು ಚುರುಕುಗೊಳಿಸಿದ ಪರಿಣಾಮ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಯಿತು. ಗೋವಾ ಮತ್ತಿತರ ಕಡೆಯಿಂದ ಬರುತ್ತಿದ್ದ ಸೆಕೆಂಡ್ಸ್ ಮದ್ಯವನ್ನು ತಡೆಗಟ್ಟಿದ್ದರಿಂದ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಅಬಕಾರಿ ತೆರಿಗೆ ಸಂಗ್ರಹವಾಗಿದೆ. ಶೇಕಡ 10ರಷ್ಟು ಮುದ್ರಾಂಕ ಶುಲ್ಕ ರಿಯಾಯ್ತಿ ನೀಡಿದ್ದರಿಂದ 100 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ತೆರಿಗೇತರ ಆದಾಯವನ್ನು 4 ಸಾವಿರ ಕೋಟಿ ನಿಗದಿ ಮಾಡಲಾಗಿತ್ತು. ಈಗ ಅದು 6 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಬ್ಬಿಣದ ಅದಿರು ಮಾರಾಟ ಮಾಡಿದ್ದರಿಂದ 500 ಕೋಟಿ ಸಂಗ್ರಹವಾಯಿತು. ಗಣಿಗಾರಿಕೆಗೆ ಅನುಕೂಲ ಮಾಡಿಕೊಟ್ಟಿದ್ದರಿಂದ ತೆರಿಗೆಯೇತರ ಆದಾಯ ಸಂಗ್ರಹಿಸಲು ಸಾದ್ಯವಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು.
2022-23ನೇ ಸಾಲಿನ ಆರ್ಥಿಕ ಸಾಲಿನಲ್ಲಿ 10 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆಯೇತರ ಆದಾಯ ಹೊಂದುವ ಗುರಿ ಹೊಂದಿದ್ದು, ಈ ವಲಯದ ಆದಾಯ ಹೆಚ್ಚಳವಾಗಬೇಕಾಗಿದೆ. ಅನಾವಶ್ಯಕ ವೆಚ್ಚವನ್ನು ತಗ್ಗಿಸಬೇಕು. ಇಲ್ಲದಿದ್ದರೆ ಜನರ ಮೇಲೆ ಆರ್ಥಿಕ ಹೊರೆ ಬೀಳಲಿದೆ. 2021-22ನೇ ಸಾಲಿನಲ್ಲಿ 67,100 ಕೋಟಿ ರೂಪಾಯಿ ಸಾಲ ಪಡೆಯುವ ಅವಕಾಶವಿದ್ದರೂ 63,100 ಕೋಟಿ ರೂಪಾಯಿ ಸಾಲ ಪಡೆದು, 4 ಸಾವಿರ ಕೋಟಿ ರೂಪಾಯಿ ಕಡಿಮೆ ಸಾಲ ಮಾಡಿದ್ದೇವೆ ಎಂದು ಅವರು ಸಮರ್ಥಿಸಿಕೊಂಡರು.
