ಚಿಕ್ಕಬಳ್ಳಾಪುರ: ರಾಜ್ಯ ಸರಕಾರದ ವಿನೂತನ “ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆ”ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಬಳ್ಳಾಪುರದಲ್ಲಿ ಇಂದು ಚಾಲನೆ ನೀಡಿದರು. ಜಿಲ್ಲೆಯ ಗುಂಗಿರಲಹಳ್ಳಿಯ ಹನುಮಪ್ಪ ದೊಡ್ಡಪ್ಪಯ್ಯ ಅವರಿಗೆ ಪಹಣಿ, ಸರ್ವೆ ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಯೋಜನೆಗೆ ಹಸಿರು ನಿಶಾನೆ ತೋರಿದರು.
ಬಳಿಕ ಅರಳಿಕಟ್ಟೆ ಸಂವಾದದಲ್ಲಿ ಅವರು ಪಾಲ್ಗೊಂಡರು. ಜಮೀನು ಕುರಿತ ದಾಖಲೆಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ಜನರು ಸರಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಕಂದಾಯ ದಾಖಲೆಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುವ ಯೋಜನೆ ಜಾರಿಗೊಳಿಸಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಇದು ಜಾರಿಗೆ ಬರುತ್ತಿದೆ . ನಂತರ ಮುಖ್ಯಮಂತ್ರಿ, ಕಂದಾಯ ಇಲಾಖೆಯಲ್ಲಿ ಜನಸ್ನೇಹಿ ಆಡಳಿತ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯದಲ್ಲಿ ತೊಡಗಿದೆ. ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ, ಗ್ರಾಮವಾಸ್ತವ್ಯ ಸೇರಿ ಹಲವು ವಿನೂತನ ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಇದೀಗ ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು. ಈ ಯೋಜನೆ ಮೂಲಕ ರಾಜ್ಯದ 55 ಲಕ್ಷ ರೈತರಿಗೆ 5 ಕೋಟಿ ವಿವಿಧ ದಾಖಲಾತಿ ಪತ್ರಗಳನ್ನು ಒಂದೇ ದಿನದಲ್ಲಿ ರಾಜ್ಯಾದ್ಯಂತ ವಿತರಿಸಲಾಗುತ್ತಿದೆ. ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ಸಾರ್ವಜನಿಕರು, ರೈತರು, ಸರ್ಕಾರಿ ಕಚೇರಿಗಳಿಗೆ ಪದೆ ಪದೇ ಸುತ್ತಾಡುವುದು ತಪ್ಪುತ್ತದೆ . ಅಲ್ಲದೇ, ಮಧ್ಯವರ್ತಿಗಳ ಶೋಷಣೆಯಿಲ್ಲದೆ, ದಾಖಲೆಗಳು ಫಲಾನುಭವಿಗಳನ್ನು ಮುಟ್ಟುತ್ತವೆ ಎಂದು ಹೇಳಿದರು.
ಜಾಹೀರಾತು: ಲಿಂಗಸಗೂರು ಪಟ್ಟಣದಲ್ಲಿ ಹೊಸದಾಗಿ ಪ್ರಾರಂಭವಾಗಿರುವ “ಸಮೃದ್ಧಿ ಹಾರ್ಡವೇರ್ & ಪೇಂಟ್ಸ್ ! ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಾರ್ಡವೇರ್ ಸಾಮಗ್ರಿಗಳು ಮತ್ತು ಪೇಂಟ್ಸ್ !.

ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್, ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಕರ್ನಾಟಕ ಮಾವು ಮಾರುಕಟ್ಟೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ವಿ. ನಾಗರಾಜ್, ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿ ತುಷಾರ್ ಗಿರಿನಾಥ್, ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್, ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ , ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಜಿಲ್ಲಾಧಿಕಾರಿ ಆರ್. ಲತಾ ಮತ್ತಿತರರು ಉಪಸ್ಥಿತರಿದ್ದರು.