- ಜಪಾನ್ ನೂತನ ಪ್ರಧಾನಿಯಾಗಿ ಫುಮಿಯೋ ಕಿಷಿದಾ ಅಧಿಕಾರ ಸ್ವೀಕಾರ ಮಾಡಿದ್ದಾರೆ. 64 ವರ್ಷದ ಕಿಷಿದಾ ಅವರು ಜಪಾನ್ ನ 100ನೇ ಪ್ರಧಾನಮಂತ್ರಿಯಾಗಿದ್ದಾರೆ. ಫುಮಿಯೋ ಕಿಷಿದಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
- 2021ರ ನೊಬಲ್ ಪ್ರಶಸ್ತಿ ಪ್ರಕಟವಾಗಿದ್ದು, ಡೇವಿಡ್ ಜೂಲಿಯಸ್ ಮತ್ತು ಅರ್ಡೆಮ್ ಪಟಪೂಟಿಯನ್ ರವರು ಶರೀರಶಾಸ್ತ್ರ ಅಥವಾ ಔಷಧ ವಿಭಾಗದಲ್ಲಿ ಜಂಟಿಯಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಇಬ್ಬರು ವಿಜ್ಞಾನಿಗಳು ತಾಪಮಾನದ ಗ್ರಾಹಕ ಮತ್ತು ಸ್ವರ್ಶ ಎನ್ನುವ ವಿಷಯದ ಕುರಿತ ಅಧ್ಯಯನಕ್ಕೆ ಈ ಪ್ರಶಸ್ತಿ ಲಭಿಸಿದೆ.
- ಭಾರತದಲ್ಲಿ ಒಟ್ಟು ಕೋವಿಡ್-19 ವಿವರಗಳು: (ಅಕ್ಟೋಬರ್ 4, 2021 ಬೆಳಿಗ್ಗೆ 08.00) 97.89% ಚೇತರಿಸಿಕೊಂಡವರು (3,31,121,247) 0.78% ಸಕ್ರಿಯ ಪ್ರಕರಣಗಳು (2,64,458) 1.33% ಸಾವಿನ ಸಂಖ್ಯೆ (4,48,997)
- ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿವನಗರ ಬಳಿ ನಿರ್ಮಿಸಲಾಗಿರುವ ಇಂಟಿಗ್ರೇಟೆಡ್ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ಅವರು, ಗೋ ಪೂಜೆ ನೆರವೇರಿಸಿದರು. ಸಚಿವರಾದ ವಿ. ಸೋಮಣ್ಣ, ಕೆ. ಗೋಪಾಲಯ್ಯ ಹಾಗೂ ಸಂಸದ ಪಿ.ಸಿ. ಮೋಹನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಒಟ್ಟು 71.98 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 655 ಮೀಟರ್ ಉದ್ದದ ಇಂಟಿಗ್ರೇಟೆಡ್ ಮೇಲ್ಸೇತುವೆ ಇದಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ, ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಸಿಗ್ನಲ್ ಮುಕ್ತ ಸುಗಮ ಸಂಚಾರದ ಅಗತ್ಯವಿದೆ. ಮುಖ್ಯವಾಗಿ ತುಮಕೂರು- ಮೈಸೂರು ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಇಂಟಿಗ್ರೇಟೆಡ್ ಮೇಲ್ಸೇತುವೆಯಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
- ನವ ದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ-ಡಿಆರ್ ಡಿಒದ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡರು. ಕಾರ್ಯಕ್ರಮ ಉದ್ದೇಶಿಸಿ, ಭಾರತ ಇಂದು ನೂತನ ಕನಸುಗಳನ್ನು ಬೆಳೆಸುವತ್ತ ಕಾರ್ಯಪ್ರವೃತ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹೊಸ ಕನಸುಗಳನ್ನು ಸಾಕಾರಗೊಳಿಸಲು ಸದೃಢವಾದ ಹೆಜ್ಜೆ ಇಡಲಾಗುತ್ತಿದೆ. ಸೇನಾ ಸಾಮರ್ಥ್ಯ ವರ್ಧನೆಗೆ ನೂತನ ತಂತ್ರಜ್ಞಾನ ಅಗತ್ಯವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಯುವವಿಜ್ಞಾನಿಗಳ ಆದ್ಯತೆಯಾಗಬೇಕು ಎಂದರು. ದೇಶಕ್ಕಾಗಿ ಯುವಕರು ವಿನೂತನ ಆವಿಷ್ಕಾರ, ಸಂಶೋಧನೆಗಳನ್ನು ಕೈಗೊಳ್ಳಬೇಕು. ಇದರಿಂದ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ ರಾಜನಾಥ್ ಸಿಂಗ್, ದೇಶದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಖಾಸಗಿ ಕ್ಷೇತ್ರವನ್ನು ಸಹ ಬಲವರ್ಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
- ಪತ್ರಕರ್ತ, ಲೇಖಕ ಶರಣು ಹುಲ್ಲೂರು ಅವರು ಬರೆದ ಡಾ.ವಿಷ್ಣುವರ್ಧನ್ ಅವರ ಕುರಿತಾದ ಪುಸ್ತಕ ಇದೀಗ ಹತ್ತು ಸಾವಿರ ಮಕ್ಕಳ ತಲುಪಿ, ದಾಖಲೆ ಬರೆದಿದೆ.
