- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕಲಾವಿದ ಅರುಣ್ ಯೋಗಿರಾಜ್ ಅವರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 2 ಅಡಿ ಏಕಶಿಲೆಯ ಕಲ್ಲಿನ ಶಿಲ್ಪವನ್ನು ಸ್ವೀಕರಿಸಿದರು. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಹಿಂದೆ ಕೇದಾರನಾಥದಲ್ಲಿ 12 ಅಡಿ ಎತ್ತರ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿದ್ದರು.
- ಕಾರ್ಯಭಾರ ಕೊರತೆ ಎದುರಿಸುತ್ತಿರುವ 44 ಉಪನ್ಯಾಸಕರನ್ನು ವರ್ಗಾವಣೆ ಮಾಡಲು ಏಪ್ರಿಲ್ 8 ರಂದು ಕೌನ್ಸಲಿಂಗ್ ನಡೆಸುವುದಾಗಿ ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ. ನಿಯಮಗಳ ಪ್ರಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲೆ,ವಾಣಿಜ್ಯ ಮತ್ತು ಭಾಷಾ ವಿಷಯಗಳ ಬೋಧಕರಿಗೆ ವಾರಕ್ಕೆ 16 ಗಂಟೆ, ಪ್ರಾಯೋಗಿಕ ತರಬೇತಿ ಇರುವ ವಿಷಯಗಳ ಬೋಧಕರಿಗೆ 20 ಗಂಟೆ ಕಾರ್ಯಭಾರ ಇರಬೇಕು. 20 ಗಂಟೆ ಕಡಿಮೆ ಕಾರ್ಯಭಾರ ಇರುವ ಉಪನ್ಯಾಸಕರನ್ನು ಸಾಧ್ಯವಾದಷ್ಟು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿನ ವಲಯದ ಒಳಗೆ ವರ್ಗಾವಣೆ ಮಾಡಲು ಪ್ರಯತ್ನಿಸುವುದಾಗಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- 50 ವರ್ಷ ಮೇಲ್ಪಟ್ಟ ಮಾಜಿ ಕುಸ್ತಿ ಪೈಲ್ವಾನರ ಮಾಸಾಶನವನ್ನು 1 ಸಾವಿರ ರೂಪಾಯಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಾಸಾಶನ ಹೆಚ್ಚಳದ ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ 1 ತಿಂಗಳೊಳಗಾಗಿ ಸರ್ಕಾರದ ಅಧಿಕೃತ ಆದೇಶ ಜಾರಿಯಾಗಿದೆ. ಮಾಸಾಶನ ಹೆಚ್ಚಳದ ಬಳಿಕ ರಾಜ್ಯಮಟ್ಟದ ಪೈಲ್ವಾನರಿಗೆ 3 ಸಾವಿರದ 500 ರಾಷ್ಟ್ರಮಟ್ಟದ ಪೈಲ್ವಾನರಿಗೆ 4 ಸಾವಿರ ರೂಪಾಯಿ, ಅಂತಾರಾಷ್ಟ್ರೀಯ ಮಟ್ಟದ ಪೈಲ್ವಾನರಿಗೆ 5 ಸಾವಿರ ರೂಪಾಯಿ ಮಾಸಾಶನ ಲಭ್ಯವಾಗಲಿದೆ.
- ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಮೈಸೂರಿನಲ್ಲಿ ಏಪ್ರಿಲ್ 7 ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ. ಉದ್ಯೋಗಾಕಾಂಕ್ಷಿಗಳು ನಿಗಮದ ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಂಡು, ಈ ಮೇಳದ ಸದುಪಯೋಗವನ್ನು ಪಡೆಯಬಹುದು.
- ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಗೃಹ ರಕ್ಷಕ ದಳದ ನೂತನ ವಾಹನಗಳನ್ನು ವಿಧಾನಸೌಧದ ಮುಂಭಾಗ ಗೃಹ ಸಚಿವ ಆರಗ ಜ್ಞಾನೇಂದ್ರ ಲೋಕಾರ್ಪಣೆಗೊಳಿಸಿದರು.
- ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದ ಆವರಣದಲ್ಲಿರುವ ಬಾಬುಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯ ಸೇವೆ ಸಲ್ಲಿಸಿದವರಿಗೆ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
- ದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಿತು.
- ಪಂಜಾಬ್ ಸಿಎಂ ಭಗವಂತ್ ಮಾನ್, ರಾಜ್ಯದಲ್ಲಿ ದರೋಡೆಕೋರ ವಿರೋಧಿ ಕಾರ್ಯಪಡೆಯ ರಚನೆಗೆ ಆದೇಶ ! ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರು ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ.
