ಜಾಗತಿಕ ಕ್ರೀಡಾ ಕ್ಷೇತ್ರದ ಮತ್ತೊಂದು ಮಹತ್ತರ ಕೂಟ ಕಾಮನ್‍ವೆಲ್ತ್ ಗೇಮ್ಸ್ ಇಂದಿನಿಂದ ಆಗಸ್ಟ್ 8ರ ವರೆಗೆ ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯಲಿದೆ. ಒಟ್ಟು 72 ಕಾಮನ್‍ವೆಲ್ತ್ ರಾಷ್ಟ್ರಗಳು ಪಾಲ್ಗೊಳ್ಳಲಿದ್ದು, 20 ಕ್ರೀಡೆಗಳಲ್ಲಿ 280 ಸ್ಪರ್ಧೆಗಳು ನಡೆಯಲಿವೆ. ಸುಮಾರು 5,054 ಅಥ್ಲೀಟ್‍ಗಳು ಈ ಬಾರಿಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದ ಬಳಿಕ ಇದೀಗ ಇಂಗ್ಲೆಂಡ್ ಮತ್ತೊಮ್ಮೆ ಬೃಹತ್ ಕ್ರೀಡಾ ಸ್ಪರ್ಧೆಯ ಯಶಸ್ವಿ ಆಯೋಜನೆಗೆ ಎಲ್ಲ ರೀತಿಯಿಂದಲೂ ಸಿದ್ಧವಾಗಿದೆ. ಈ ಬಾರಿ ನಡೆಯುತ್ತಿರುವುದು ಒಟ್ಟಾರೆ 22ನೇ ಆವೃತ್ತಿಯ ಕಾಮನ್‍ವೆಲ್ತ್ ಕ್ರೀಡಾಕೂಟವಾಗಿದ್ದು, ಬರ್ಮಿಂಗ್‍ಹ್ಯಾಮ್‍ನ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ 7 ಗಂಟೆಗೆ ವಿಧ್ಯುಕ್ತ ಚಾಲನೆ ನೀಡಲಾಗುತ್ತಿದೆ. ರಾತ್ರಿ 11.30ವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಭಾರತ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ.

ಈ ಮಹೋನ್ನತ ಸ್ಪರ್ಧಾ ಅಖಾಡದಲ್ಲಿ ಒಟ್ಟಾರೆ 18ನೇ ಬಾರಿಗೆ ಭಾರತ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಒಟ್ಟು 16 ಕ್ರೀಡೆಗಳ 213 ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳು ತಮ್ಮ ಸಾಮಥ್ರ್ಯವನ್ನು ಒರೆಗಲ್ಲಿಗೆ ಹಚ್ಚಲಿದ್ದಾರೆ. 108 ಪುರುಷ ಹಾಗೂ 105 ಮಹಿಳಾ ಅಥ್ಲೀಟ್‍ಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‍ನಲ್ಲಿ ನಡೆದ ಕಳೆದ 2018ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚುಗಳೊಂದಿಗೆ ಒಟ್ಟಾರೆ 66 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ತಮ್ಮ ಛಾಪು ಮೂಡಿಸಿದ್ದರು.
ಈ ಬಾರಿಯ ವಿಶೇಷವೆಂದರೆ, ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಆಟ ಸೇರ್ಪಡೆಗೊಂಡಿದೆ. ಚೊಚ್ಚಲ ಪ್ರವೇಶದಲ್ಲಿಯೇ ಭಾರತದ ಆಟಗಾರ್ತಿಯರು ಐತಿಹಾಸಿಕ ಸಾಧನೆಯ ಭರವಸೆಯಲ್ಲಿದ್ದಾರೆ. ಉಳಿದಂತೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಹಾಕಿ, ಪ್ಯಾರಾ ಪವರ್‍ಲಿಫ್ಟಿಂಗ್, ವೇಟ್‍ಲಿಫ್ಟಿಂಗ್ ಹಾಗೂ ಕುಸ್ತಿ ಸ್ಪರ್ಧೆಗಳಲ್ಲೂ ಸಹ ಭಾರತಕ್ಕೆ ಪದಕ ಗೆದ್ದು ತರುವಂತಹ ಸಮರ್ಥಶಾಲಿ ಕ್ರೀಡಾಳುಗಳಿದ್ದಾರೆ.
-Follow us on twitter
-Follow us on Pinterest
-Follow us on ShareChat