ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ, ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ‘ಇ-ಶ್ರಮ್’ ಯೋಜನೆಗೆ ಚಾಲನೆ ನೀಡಿದರು.
ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಹಾಗೂ ಕಾರ್ಮಿಕ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಿ.ಕಲ್ಪನಾ, ಇ-ಆಡಳಿತ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ವಿ.ಪೊನ್ನುರಾಜ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ ಮತ್ತು ಇತರರು ಉಪಸ್ಥಿತರಿದ್ದರು.

ಇ-ಶ್ರಮ್ ಕುರಿತು ಸಂಕ್ಷಿಪ್ತ ಮಾಹಿತಿ ( ಕೃಪೆ: ಪಿ ಐ ಬಿ) : ಭಾರತದ ಇತಿಹಾಸದಲ್ಲಿಯೇ ಮೊದಲ ಸಲ 38ಕೋಟಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ವ್ಯವಸ್ಥೆಯನ್ನು ರಚಿಸಲಾಗಿದೆ. ಇದು ಕೇವಲ ಕಾರ್ಮಿಕರನ್ನು ನೊಂದಾಯಿಸುವುದಷ್ಟೇ ಅಲ್ಲ, ಸಾಮಾಜಿಕ ಸುರಕ್ಷೆ ನೀಡುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜನಕಲ್ಯಾಣ ಯೋಜನೆಗಳು ಅವರವರೆಗೂ ತಲುಪುವಂತೆ ಸಹಾಯ ಮಾಡುತ್ತವೆ.
ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ ನೊಂದಾಯಿಸಿದ ಶ್ರಮಿಕ ವರ್ಗದಲ್ಲಿ ಯಾರಾದರೂ ಆಕಸ್ಮಿಕ ಅಪಘಾತಕ್ಕೆ ಒಳಗಾಗಿ ಮೃತರಾದರೆ ಮೃತರ ಅವಲಂಬಿತರಿಗೆ 2 ಲಕ್ಷ ರೂಪಾಯಿ ವಿಮೆಯ ಮೊತ್ತ ಪರಿಹಾರವಾಗಿ ದೊರೆಯುತ್ತದೆ. ಶಾಶ್ವತ ಅಂಗವೈಕಲ್ಯ ಹೊಂದಿದರೂ ಈ ಪರಿಹಾರಕ್ಕೆ ಕಾರ್ಮಿಕರು ಅರ್ಹರಾಗಿರುತ್ತಾರೆ. ಅಲ್ಪಪ್ರಮಾಣದ ಅಂಗವೈಕಲ್ಯಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಧನ ಈ ವಿಮೆ ಅಡಿಯಲ್ಲಿ ಪ್ರತಿಕಾರ್ಮಿಕನಿಗೂ ದೊರೆಯುತ್ತದೆ. ಈ ಯೋಜನೆಗೆ ಹಾಗೂ ಈ ಪರಿಹಾರ ನೀಡುವಲ್ಲಿ ಸರ್ಕಾರ ಬದ್ಧವಾಗಿರುತ್ತದೆ. ಕಾರ್ಮಿಕರ ಹಿತಾಸಕ್ತಿ ಕಾಯಲು ಮೊದಲ ಆದ್ಯತೆ ನೀಡಲಾಗಿದೆ.
ಪ್ರತಿ ದಾಖಲೀಕರಣಕ್ಕೆ ಇ- ಶ್ರಮ್ ಪೋರ್ಟಲ್‌ನಲ್ಲಿ ದಾಖಲಿಸಲಾದ, ನೊಂದಾಯಿತ ಪ್ರತಿ ವ್ಯಕ್ತಿಗೂ ಒಂದು ವಿಶೇಷ ಖಾತೆ ಸಂಖ್ಯೆ ನೀಡಲಾಗುವುದು. (ಯುನಿವರ್ಸಲ್ ಅಕೌಂಟ್ ನಂಬರ್, ಯು ಎಎನ್) ಇದರ ಮೂಲಕ ದೇಶದ ಯಾವುದೇ ಮೂಲೆಯಿಂದಲಾದರೂ, ಯಾವ ಸಮಯದಲ್ಲಿಯಾದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಚಯಿಸುವ ಜನಕಲ್ಯಾಣ ಯೋಜನೆಯ ಲಾಭಗಳನ್ನು ಪಡೆಯಲು ಅಸಂಘಟಿತ ವಲಯದ ಕಾರ್ಮಿಕರು ಅರ್ಹರಾಗಿರುತ್ತಾರೆ.
